ಮೂಡಲಗಿ : ಸಮರ್ಥ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಸಂಘ ಮೂಡಲಗಿ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳಿಗಾಗಿ ಸೋಮವಾರದಂದು ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಗ್ರೇಡ್-2 ತಹಶೀಲ್ದಾರ್ ಶಿವಾನಂದ ಬಬಲಿ ಮುಖಾಂತರ ಕಾರ್ಮಿಕರ ಸಚಿವರಿಗೆ ಹಾಗೂ ಸಹಾಯಕ ಕಾರ್ಮಿಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಸಮರ್ಥ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಸಂಘ ಅಧ್ಯಕ್ಷ ಬಸವರಾಜ ಪೋಳ ಮಾತನಾಡಿ, ತಾಲೂಕಿನ ವ್ಯಾಪ್ತಿಯಲ್ಲಿ ಸುಮಾರು ಏಂಟು ಸಾವಿರ ಕಾರ್ಮಿಕರಿದ್ದು, ಕಾರ್ಮಿಕರ ನಿರೀಕ್ಷಕರಿಲ್ಲದೆ ಕಾರ್ಮಿಕ ಇಲಾಖೆಯಿಂದ ನೀಡುವ ವಿವಿಧ ಸೌಲಭ್ಯಗಳು ಸರಿಯಾಗಿ ದೊರೆಯುತ್ತಿಲ್ಲ. ಸುಮಾರು ಮೂರು ತಿಂಗಳಿಂದ ಕಾರ್ಮಿಕರ ಹೊಸ ಕಾರ್ಡ್ ಹಾಗೂ ಕಾರ್ಡ ನವೀಕರಣ ಆಗುತ್ತಿಲ್ಲ ಎಂದು ದೂರಿದ ಅವರು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಕಟ್ಟಡ ಕಾರ್ಮಿಕರಿಗೆ ಮತ್ತು ಅವರ ಮಕ್ಕಳ ಮದುವೆಗೆ ದೊರೆಯುವ ಧನಸಹಾಯ ಕಳೆದ ಮೂರು ವರ್ಷಗಳಿಂದ ಸರಿಯಾಗಿ ವಿತರಣೆಯಾಗುತ್ತಿಲ್ಲ, ಕಟ್ಟಡ ಕಾರ್ಮಿಕರಿಗೆ ಮನೆ ಕಟ್ಟಲು 5 ಲಕ್ಷ ರೂಗಳ ಸಹಾಯ ಧನವನ್ನು ಕಾರ್ಮಿಕ ಕಲ್ಯಾಣ ಮಂಡಳಿಯಿಂದಲೇ ನೀಡಬೇಕು. ಇಲಾಖೆಯಿಂದ ನೀಡುವ ಪ್ರತಿಯೊಂದು ಸೌಲಭ್ಯದ ಬಗ್ಗೆ ಮಾಹಿತಿಯನ್ನು ದಿನಪತ್ರಿಕೆಯಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳನ್ನು ಪ್ರಕಟಿಸಬೇಕು. ಈ ಎಲ್ಲ ಬೇಡಿಕೆಗಳನ್ನು ಶೀಘ್ರವಾಗಿ ಎರಡು ಮೂರು ದಿನಗಳಲ್ಲಿ ಈಡೇರಿಸದಿದ್ದರೆ ಅಧಿವೇಶನ ನಡೆಯುತ್ತಿರುವ ಸುವರ್ಣಸೌಧದ ಮುಂದೆ ಹೋರಾಟ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಸಂಘದ ಕಾರ್ಯದರ್ಶಿ ಸುಭಾಸ ಗೋಡ್ಯಾಗೋಳ, ಗುರುನಾಥ ಗಂಗನ್ನವರ, ಹಸನ್ ಕುರಬೇಟ ಮಾತನಾಡಿ, ಬಿಸಿಲು ಮಳೆಯನ್ನದೆ ಹಗಲಿರುಳು ದುಡಿಯುವ ಕಾರ್ಮಿಕರ ಮಕ್ಕಳಿಗೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯಿಂದ ಕಲಿಕೆ ಭಾಗ್ಯ ಯೋಜನೆಯಿಂದ ನೀಡುತ್ತಿದ್ದ, ಸಹಾಯಧನಕ್ಕೆ ಕಾಂಗ್ರೇಸ್ ಸರ್ಕಾರ ಕತ್ತರಿ ಹಾಕಿದ್ದು ಸರಿಯಲ್ಲ. ಆ ಆದೇಶವನ್ನು ಶೀಘ್ರವಾಗಿ ವಾಪಸ್ ಪಡೆಯಬೇಕು. ಕಾರ್ಮಿಕ ಇಲಾಖೆಯಿಂದ ಸಿಗಬೇಕಾದ ಶೈಕ್ಷಣಿಕ ಧನಸಹಾಯ, ಮದುವೆ ಧನ ಸಹಾಯ, ಜೀವ ವಿಮೆ, ಬಸ್ ಪಾಸ್ ಹೀಗೆ ಇನ್ನೂ ಹಲವಾರು ಸೌಲಭ್ಯಗಳಿಂದ ಕಾರ್ಮಿಕರು ವಂಚಿತರಾಗುತ್ತಿದ್ದಾರೆ. ಈ ಕೂಡಲೇ ಸರ್ಕಾರ ವಿಶೇಷ ಗಮನ ಹರಿಸಿ ಕಾರ್ಮಿಕರಿಗೆ ಅನುಕೂಲ ಮಾಡಿಕೊಡಬೇಕೆಂದರು.
ನೋಂದಾಯಿತ ಆಸ್ಪತ್ರೆಗಳಿಂದ ಚಿಕಿತ್ಸೆ ಪಡೆದಲ್ಲಿ ಮಾತ್ರ ಸಹಾಯಧನ ನೀಡುತ್ತಿವೆ. ಅದನ್ನು ನಿಯಮದಿಂದ ನಿನಾಯಿತಿ ನೀಡಬೇಕು ಮತ್ತು ಕಾರ್ಮಿಕರು ಯಾವುದೇ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದಲ್ಲಿ ಪೂರ್ತಿ ವೆಚ್ಚವನ್ನು ಕಾರ್ಮಿಕ ಇಲಾಖೆಯಿಂದ ಸರ್ಕಾರ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂಧರ್ಭದಲ್ಲಿ ಕಾರ್ಮಿಕರಾದ ತುಕ್ಕಾರಾಮ ಕುಲಗೋಡ, ಯಶವಂತ ರಾಮೋಜಿ, ಯಾಸೀನ್ ಪಟಾನ್, ನಂದೇಶ ಕೆಳಗಡೆ, ತಮ್ಮಣ್ಣ ಗಾಡಿವಡರ್, ಶ್ರೀಶೈಲ ಶೀಳನ್ನವರ, ವಿಠ್ಠಲ ಪತ್ತಾರ, ಸುನೀಲ ಮೋಪಗಾರ, ಬಸವರಾಜ ಗಂಗುರಿ, ಮಲ್ಲಿಕ್ ನಧಾಪ್, ಈರಪ್ಪ ಬಡಿಗೇರ, ಬೀರಪ್ಪ ಮಾಳಗಿ, ಪಡದೇಪ್ಪ ಕೋಟಿನ್, ನೀಲವ್ವ ಚಿಪ್ಪಲಕಟ್ಟಿ, ಬೌರವ್ವ ಮರಾಠಿ, ಅನಿತಾ ದಳವಾಯಿ ಸೇರಿದಂತೆ ಅನೇಕ ಕಾರ್ಮಿಕರು ಉಪಸ್ಥಿತರಿದ್ದರು.
ಪೋಟೊ ಕ್ಯಾಪ್ಸನ್ > ಮೂಡಲಗಿ : ಕಾರ್ಮಿಕರ ವಿವಿಧ ಬೇಡಿಕೆಗಳಿಗಾಗಿ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಗ್ರೇಡ್-2 ತಹಶೀಲ್ದಾರ್ ಶಿವಾನಂದ ಬಬಲಿ ಮುಖಾಂತರ ಕಾರ್ಮಿಕರ ಸಚಿವರಿಗೆ ಹಾಗೂ ಸಹಾಯಕ ಕಾರ್ಮಿಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
Home ಸಾರ್ವಜನಿಕ ಧ್ವನಿ ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳಿಗಾಗಿ ಮೂಡಲಗಿ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಪ್ರತಿಭಟನೆ