ನಿನ್ನೆ ದಿ ವೀಕ್ ನ ಸಚ್ಚಿದಾನಂದ ಮೂರ್ತಿ (ಸಚ್ಚಿ) ಅವರ ನೆನಪಿನಲ್ಲಿ ಆಯೋಜಿಸಿದ್ದ “ನಮ್ಮ ಸಚ್ಚಿ” ಒಂದು ನೆನಪು ಕಾರ್ಯಕ್ರಮದ ಫಾರ್ಮ್ಯಾಟ್ ಆತ್ಮೀಯವಾಗಿತ್ತು. ಆರಂಭದಲ್ಲಿ ಮಾತನಾಡಿದ ರಾಮಕೃಷ್ಣ ಉಪಾಧ್ಯಾಯ ಇದು ಮೌರ್ನಿಂಗ್ ಸಭೆಯಲ್ಲ ಬದಲಿಗೆ ಸಚ್ಚಿ ಅವರನ್ನು ಸೆಲೆಬ್ರೇಟ್ ಮಾಡಲು ಸೇರಿದ್ದೇವೆ ಎಂದು ಹೇಳಿದರಾದರೂ ಕಟ್ಟಿಕೊಳ್ಳುತ್ತಿದ್ದ ಗಂಟಲು, ಒಸರುತ್ತಿದ್ದ ಕಣ್ಣೀರನ್ನು ಉಪಾದ್ಯಾಯ ಅವರು ಎಡಿಟ್ ಮಾಡುತ್ತಿದ್ದದ್ದು ಎಲ್ಲರಿಗೂ ಗೋಚರಿಸಿತು. ನಂತರ ಹೆಚ್ ಬಿ ದಿನೇಶ್ ಮಾತನಾಡಿ ಸಚ್ಚಿ ಅವರ ಕುರಿತಾಗಿ ಖಾದ್ರಿ ಅಚ್ಚುತನ್ ಅವರು ಹಿಂದೆ ಬರೆದಿದ್ದ ಸೈಟೇಶನ್ ವಾಚಿಸಿದರು.
ಹಿರಿಯ ಪತ್ರಕರ್ತರಾದ ಕೃಷ್ಣಪ್ರಸಾದ್, ಡಿ ಉಮಾಪತಿ, ರಾಜನ್, ಮಾಜಿ ಐಎಎಸ್ ಅಧಿಕಾರಿ ಜಯರಾಜ್, ಶ್ರೀನಿವಾಸ ಮೂರ್ತಿ, ಐಪಿಎಸ್ ಗುರುಪ್ರಸಾದ್, ಹಿಂದೂ ರಾಮಯ್ಯ ಹೀಗೆ ಅನೇಕ ಹಿರಿಯರು ಸಚ್ಚಿ ಅವರನ್ನು ಅತ್ಯಂತ ಅಭಿಮಾನದಿಂದ ನೆನೆದರು.
ಕಾರ್ಯಕ್ರದಲ್ಲಿ ಮಾತನಾಡಿದ ಬಹುತೇಕ ಎಲ್ಲರ ಮಾತುಗಳೂ ಎಡಿಟ್ ಪೇಜ್ ಐಟಮ್ ನಂತೆಯೇ ಗಂಭೀರವಾಗಿಯೂ ತೂಕವಾಗಿಯೂ ಇದ್ದವು. ಲಾಯಲ್ಟಿ, ಇಂಟಿಗ್ರಿಟಿ, ಸೆಲ್ಫ್ ಲೆಸ್ ನೆಸ್, ಹೆಲ್ಪ್ ಫುಲ್ ಹೀಗೆ ಅವರ ಗುಣಗಳನ್ನು ಎಲ್ಲರೂ ಅವರವರ ಶೈಲಿಯಲ್ಲಿಯೇ ಅನಾವರಣಗೊಳಿಸಿದರು. ಸಚ್ಚಿ ಬರೆಯದೇ ಹೋದ ನೆನಪುಗಳ ಬಗ್ಗೆ ಬಹುತೇಕರಿಗೆ ವಿಷಾದವಿತ್ತು. ಮುಂದಿನ ಪೀಳಿಗೆಗೆ ಅದು ದೊಡ್ಡ ನಷ್ಟವೆಂದೂ ಎಲ್ಲರೂ ಭಾವಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಎಂಎಲ್ ಸಿ ಮೋಹನ್ ಕುಮಾರ್ ಕೊಂಡಜ್ಜಿ, ಮಾಜಿ ಸಚಿವರುಗಳಾದ ರೋಷನ್ ಬೇಗ್, ಸುರೇಶ್ ಕುಮಾರ್, ಹಿರಿಯ ಪತ್ರಕರ್ತರಾದ ಶೇಷಚಂದ್ರಿಕ, ವಾಸುಕಿ, ಮಟ್ಟೂ, ಬಿ.ಪಿ.ಮಲ್ಲಪ್ಪ, ಶಿವಾನಂದ ತಗಡೂರು, ಸದಾಶಿವ ಶಣೈ, ವಿನಯ್ ಮಾದವ್, ಹೀಗೆ ಎಲ್ಲರೂ ಹಿರಿಯರೇ ಸೇರಿದ್ದರು.
ಅತ್ಯಂತ ಹಿರಿಯರು 80- 90 ದಾಟಿದವರು.
ಕಿರಿಯರೆಂದರೆ 50 ದಾಟಿದವರಾಗಿದ್ದರು.
25 ರಿಂದ 45 ರೊಳಗಿನ ಒಬ್ಬ ಪತ್ರಕರ್ತನೂ ಕಾಣಲಿಲ್ಲ. ಹಿರಿಯರ ಅನುಭವಗಳಿಂದ ಕಲಿಯಲೊಲ್ಲದ ಅಥವಾ ಅದು ಇಂಪಾರ್ಟೆಂಟ್ ಎಂದು ಗಣಿಸದ ಹೊಸ ಪೀಳಿಗೆಯ ಪತ್ರಕರ್ತರು ಅರ್ಥವೇ ಆಗುವುದಿಲ್ಲ.(ನಾಗೇಶ್ ಕಾಳೇನಹಳ್ಳಿ)