ದಾವಣಗೆರೆ, ಸೆ.27; ಶಿವಭಕ್ತಿಯನ್ನು ಹೇಗೆ ಮಾಡಬೇಕೆಂಬ ಅರಿವು ಗುರುವಿನಿಂದಲೆ ಪ್ರಾಪ್ತವಾಗುವುದರಿಂದ ಗುರುಭಕ್ತಿಯ ಮೂಲಕ ಅದನ್ನು ಪಡೆದುಕೊಳ್ಳದೇ ಗುರುವನ್ನು ಕಡೆಗಣಿಸಿ ಶಿವಭಕ್ತಿಯನ್ನು ಮಾಡಿದರೆ ಅದು ಸಿದ್ಧಿಯಾಗುವುದಿಲ್ಲ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

“ಗುರುಭಕ್ತಿವಿಹೀನಸ್ಯ ಶಿವಭಕ್ತಿರ್ನ ಜಾಯತೇ” ಎಂಬ ಉಕ್ತಿಯಂತೆ ಗುರುಭಕ್ತಿ ಹೀನನಾದ ವ್ಯಕ್ತಿಗೆ ಶಿವಭಕ್ತಿಯು ಲಭಿಸುವುದಿಲ್ಲ. ವೀರಶೈವ ಧರ್ಮದ ಅಷ್ಟಾವರಣ, ಪಂಚಾಚಾರ, ಷಟ್ ಸ್ಥಲ ಎಂಬ ತತ್ತ್ವತ್ರಯಗಳಲ್ಲಿ ಮೊದಲ ತತ್ತ್ವವೇ ಗುರುವಾಗಿದೆ. ಪ್ರಪಂಚದ ಎಲ್ಲ ಜ್ಞಾನಗಳು ಗುರುವಿಂದಲೇ ಪ್ರಾಪ್ತವಾಗುವ ಕಾರಣ ಅವನೇ ಸಕಲ ವಿದ್ಯೆಗಳ ತಾಯಿಬೇರು. ಇಹಲೋಕದಲ್ಲಿ ಲಭಿಸುವ ಲೌಕಿಕ ಸುಖಗಳನ್ನು ಧರ್ಮಮಾರ್ಗದ ಮೂಲಕ ಸಂಪಾದಿಸುವ ಮತ್ತು ಪಾರಲೌಕಿಕವಾದ ಪಾರಮಾರ್ಥಿಕ ಸುಖವನ್ನು ಭಕ್ತಿ ಜ್ಞಾನ ವೈರಾಗ್ಯಾದಿಗಳ ಮೂಲಕ ಸಂಪಾದಿಸುವ ಕಲೆಯನ್ನು ಗುರುವು ಉಪದೇಶ ಮಾಡುವುದರಿಂದ ಎಲ್ಲ ಸುಖಗಳಿಗೂ ಅವನೇ ಆಧಾರಸ್ತಂಭ, ಸನಾತನ ವೀರಶೈವ ಲಿಂಗಾಯತ ಧರ್ಮಕ್ಕೆ ತನ್ನದೇ ಆದ ವಿಶಿಷ್ಟವಾದ ಆದಿ ಗುರುಪರಂಪರೆ ಇದೆ. ಗುರು ಮತ್ತು ವಿರಕ್ತ ಎಂಬುದಾಗಿ ಮೇಲ್ನೋಟಕ್ಕೆ ಈ ಪರಂಪರೆ
ಎರಡು ವಿಧವಾಗಿ ಗೋಚರಿಸುತ್ತವೆ. ಕೆಲವು ಸಣ್ಣ ಪುಟ್ಟ ವ್ಯತ್ಯಾಸಗಳನ್ನು ಹೊರತುಪಡಿಸಿದರೆ ಈ ಎರಡೂ ಪರಂಪರೆಗಳ ತತ್ವ ಸಿದ್ಧಾಂತ, ಆಚರಣೆ ಮತ್ತು ಉದ್ದೇಶಗಳು ಒಂದೇ ಆಗಿರುವುದರಿಂದ ಗುರು ಮತ್ತು ವಿರಕ್ತ ಪರಂಪರೆಗಳು ಧರ್ಮದ ಎರಡು ಕಣ್ಣುಗಳಿದ್ದಂತೆ. ಸಮಾಜವು ಕೈಜೋಡಿಸಬೇಕೆಂದು ಎರಡನ್ನೂ ವಿಭಜಿಸಿ ನೋಡುವ ಪ್ರಯತ್ನ

ಮಾಡಬಾರದು. ಪಂಚಪೀಠಗಳಲ್ಲಿ ಶ್ರೀಶೈಲ ಪೀಠದ ಸರ್ವಾಂಗೀಣ ವಿಕಾಸಕ್ಕೆ ಭದ್ರ ಅಡಿಪಾಯ ಹಾಕಿ ಧರ್ಮ, ಪೀಠ, ಸಮಾಜಗಳನ್ನು ವಿಕಾಸಗೊಳಿಸಿದವರು ವಾಗೀಶ ಪಂಡಿತಾರಾಧ್ಯ ಜಗದ್ಗುರುಗಳು. ನಂತರ ಅನೇಕ ದಶಕಗಳವರೆಗೆ ಸಮಾಜಕ್ಕೆ ಧರ್ಮದ ಮಾರ್ಗದರ್ಶನ ಮಾಡುವುದರ ಜೊತೆಗೆ ಪೀಠದ ಅಂಗಸಂಸ್ಥೆ ಮತ್ತು ಶಾಖಾ ಮಠಗಳನ್ನು ಬೆಳೆಸಿದವರು ಉಮಾಪತಿ

ಪಂಡಿತಾರಾಧ್ಯ ಜಗದ್ಗುರುಗಳವರು. ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ವೀರಶೈವ ಲಿಂಗಾಯತ ಧರ್ಮದ ಎಲ್ಲ ಒಳಪಂಗಡದವರನ್ನು ಸೇರಿಸುವುದಕ್ಕಾಗಿ ಎಲ್ಲ ಮಠಾಧೀಶರು ಸೇರಿ ಸರಕಾರವನ್ನು ಆಗ್ರಹಿಸುವ ಹೋರಾಟವನ್ನು ಮಾಡುತ್ತಿದ್ದೇವೆ. ಪ್ರತ್ಯೇಕ ಧರ್ಮದವರಿಗೆ 4.5/ ಪ್ರತಿಶತ ಮೀಸಲಾತಿ ಇದ್ದರೆ, ಓ ಬಿ ಸಿ ಯವರಿಗೆ 225/ ಪ್ರತಿಶತ ಮೀಸಲಾತಿ ಇದೆ ಆದ್ದರಿಂದ ಪ್ರತ್ಯೇಕ ಧರ್ಮದ ಮಾನ್ಯತೆಯನ್ನು ಪಡೆದುಕೊಳ್ಳುವುದಕ್ಕಿಂತ ಕೇಂದ್ರದ ಓ ಬಿ ಸಿ ಯಲ್ಲಿ ಸ್ಥಾನ ಪಡೆದುಕೊಳ್ಳುವುದು ಸಮಾಜಕ್ಕೆ ಹೆಚ್ಚು ಲಾಭಕರವಾಗಿದೆ. ಈ ಸಮಾಜದ ಎಲ್ಲ ಪಂಗಡದವರಿಗೂ ಇದನ್ನು ಕೊಡಬೇಕೆಂಬ ಆಗ್ರಹವಿರುವುದರಿಂದ ಈ ಮೂಲಕ ಸಮಾಜದಲ್ಲಿ ಸಂಘಟನೆ ಕೂಡ ಬರುತ್ತದೆ ಎಂಬುದು ನಮ್ಮ ಈ ಭಾವನೆಯಾಗಿದೆ. ಇದಕ್ಕೆ ಎಲ್ಲ ಸಮುದಾಯದವರು ಮೂಲಕ ಕರೆ ಕೊಡುತ್ತಿದ್ದೇವೆ ಎಂದರು.(ವರದಿ:ಶ್ರೀ ಮತಿ ಎ.ಬಿ.ರುದ್ರಮ್ಮ)

LEAVE A REPLY

Please enter your comment!
Please enter your name here