೧) ಧರ್ಮ ಪ್ರವರ್ತಕರೆಲ್ಲ ಪುರುಷರು; ಧರ್ಮಗಳೆಲ್ಲ ಪುರುಷ ನಿರ್ಮಿತ. ಹಾಗಾಗಿ ದೇವರನ್ನೂ ಕೂಡ ಪುರುಷನನ್ನಾಗಿ ಪರಿಭಾವಿಸಲಾಗಿದೆ. ಧರ್ಮಗಳು ರೂಪುಗೊಳ್ಳುವ ಹೊತ್ತಿಗೆ ಮಹಿಳೆಯರ ಸ್ಥಾನ ನಿಗದಿಯಾಗಿತ್ತು. ಧರ್ಮ ಪ್ರವರ್ತಕರಿಗೆ ಪುರುಷ ಪ್ರಧಾನ ವ್ಯವಸ್ಥೆಯನ್ನು ಮೀರಲಾಗಲಿಲ್ಲ.
೨) ಸ್ತ್ರೀಯರ ಬಗ್ಗೆ ಅನೇಕ ಧರ್ಮಗ್ರಂಥಗಳ ನಿಲುವು ಒಂದೇ ಬಗೆಯಾಗಿದೆ. ಆ ಹೇಳಿಕೆಗಳನ್ನು ನೋಡಿದಾಗ ಮಹಿಳೆಯರನ್ನು ಮನುಷ್ಯರಂತೆ ಪರಿಗಣಿಸದೆ ಅತ್ಯಂತ ಅವಹೇಳನದಿಂದ ಕಂಡಿರುವುದು ತಿಳಿಯುತ್ತದೆ. ಕೆಲವು ಗ್ರಂಥಗಳಲ್ಲಿ ಸ್ತ್ರೀಯರ ಬಗ್ಗೆ ಕ್ರೂರವಾದ ಹೇಳಿಕೆಗಳಿವೆ.
೩) ಸಾಂಪ್ರದಾಯಿಕ ಮತ್ತು ಪ್ರಗತಿಪರ ಎರಡು ಬಗೆಯ ಧರ್ಮಗಳೂ ಸ್ತ್ರೀಯರನ್ನು ಕುರಿತಾಗಿ ಮೂಲಭೂತವಾದಿ ಧೋರಣೆ ತಾಳಿವೆ. ಸ್ತ್ರೀ ಪುರುಷ ಸಮಾನತೆಯ ವಿಷಯದಲ್ಲಿ ಅಂತರವನ್ನು ಕಾಯ್ದುಕೊಂಡಿವೆ. ಸಾಮಾಜಿಕ ನೆಲೆಯಲ್ಲಿ ಸ್ತ್ರೀಯರಿಗೆ ಸ್ವಲ್ಪಮಟ್ಟಿನ ಅವಕಾಶಗಳನ್ನು ಕೊಟ್ಟಿವೆಯಾದರೂ ಧಾರ್ಮಿಕ ಸಮಾನತೆಯನ್ನು ನಿರಾಕರಿಸಿವೆ. ಸ್ತ್ರೀಯರ ಕುರಿತಾಗಿ ಎಲ್ಲಾ ಧರ್ಮಗಳು ಪೂರ್ವಗ್ರಹ ಪೀಡಿತವಾಗಿದ್ದು ಅನುಯಾಯಿಗಳ ಆಚರಣೆ ಮಟ್ಟದಲ್ಲಂತೂ ಕಠೋರ ನಿಯಮಗಳು ಚಾಲ್ತಿಯಲ್ಲಿವೆ. ಸ್ತ್ರೀಯರ ಕುರಿತಾಗಿ ಸಾಮಾಜಿಕವಾಗಿ ಒಂದು ರೀತಿಯ ನ್ಯಾಯವನ್ನು, ಧಾರ್ಮಿಕವಾಗಿ ಇನ್ನೊಂದು ರೀತಿಯ ನ್ಯಾಯವನ್ನು ಎತ್ತಿಹಿಡಿಯುತ್ತವೆ. ಆ ಮೂಲಕ ಎಲ್ಲಾ ಧರ್ಮಗಳೂ ಪುರುಷ ಸಮಾಜದ ಒತ್ತಡಕ್ಕೆ ಒಳಗಾಗಿ ಪುರುಷ ಪಕ್ಷಪಾತಿಯಾಗಿ ಪರಿಣಮಿಸಿವೆ. ಹಾಗಾಗಿ ಎಲ್ಲ ಧರ್ಮಗಳೂ ಪುರುಷ ಪ್ರಧಾನವಾಗಿದ್ದು, ಪುರುಷ ಪ್ರಧಾನ, ಸ್ತ್ರೀ ಅಧೀನ ಎಂಬ ತತ್ತ್ವ ವನ್ನೇ ಈಗಲೂ ಪ್ರತಿಪಾದಿಸಲಾಗುತ್ತಿದೆ.