ಇದು ಶ್ರೀ ಟಿ.ಎನ್. ಶೇಷನ್ ಅವರು ಒಂದು ಸೆಮಿನಾರಿನಲ್ಲಿ ಹಂಚಿಕೊಂಡ ಒಂದು ಅನುಭವ. ನಿಜಕ್ಕೂ ಒಂದು ಅದ್ಭುತ ಪಾಠವೂ ಹೌದು.
ಶೇಷನ್ ಅವರು ಭಾರತದ ಮುಖ್ಯ ಚುನಾವಣಾ ಅಧಿಕಾರಿಗಳಾಗಿದ್ದಾಗ, ಒಮ್ಮೆ ತಮ್ಮ ಪತ್ನಿಯೊಂದಿಗೆ ಉತ್ತರ ಪ್ರದೇಶದಲ್ಲಿ ಪಿಕ್ನಿಕ್ ಹೋಗಿದ್ದರಂತೆ. ಪ್ರಯಾಣ ಮಾಡ್ತಿರೋವಾಗ, ದಾರಿಯಲ್ಲಿ ಒಂದು ದೊಡ್ಡ ಮಾವಿನ ತೋಪು ಅವರ ಕಣ್ಣಿಗೆ ಬಿತ್ತು. ಆ ತೋಪಿನ ತುಂಬಾ ಗುಬ್ಬಚ್ಚಿ ಗೂಡುಗಳಿದ್ದವು.
ಶೇಷನ್ ಅವರ ಪತ್ನಿ ತಮಗೆ ಎರಡು ಗುಬ್ಬಚ್ಚಿ ಗೂಡುಗಳು ಬೇಕು ಎಂದು ಅಪೇಕ್ಷೆ ಪಟ್ಟರಂತೆ.
ತಕ್ಷಣ ಅವರ ಜೊತೆ ಬಂದಿದ್ದ ಪೋಲೀಸ್ ಪೇದೆ ಅಲ್ಲೇ ಹತ್ತಿರದಲ್ಲಿ ದನ ಕಾಯುತ್ತಿದ್ದ ಹುಡುಗನನ್ನು ಕರೆದು ಎರಡು ಗುಬ್ಬಚ್ಚಿ ಗೂಡು ತಂದುಕೊಡು, ನಿನಗೆ 5 ರೂ ಕೊಡ್ತೀನಿ ಅಂದರಂತೆ. ಆದರೆ ಆ ಹುಡುಗ ಒಪ್ಪಲಿಲ್ಲ. ಆಗ ಶೇಷನ್ 20 ರೂ ಕೊಡುವುದಾಗಿ ಹೇಳಿದರು, ಹುಡುಗ ಅದಕ್ಕೂ ಒಪ್ಪಲಿಲ್ಲ.
ಆಗ ಪೊಲೀಸ್ ಪೇದೆ, ಶೇಷನ್ ಅವರನ್ನು ತೋರಿಸಿ, ಇವರು ದೊಡ್ಡ ಅಧಿಕಾರಿ, ಹಾಗೆಲ್ಲ ಆಗಲ್ಲ ಎಂದು ಹೇಳಬಾರದು, ತಂದುಕೊಡು ಅಂತ ಹೇಳಿದರು. ಆ ಹುಡುಗ ಶೇಷನ್ ಅವರನ್ನು ನೋಡಿ, ಸ್ವಾಮಿ, ನೀವು ಏನೇ ಕೊಟ್ರೂ ನಾನು ಗೂಡು ತಂದುಕೊಡಲ್ಲ. ಯಾಕೆಂದ್ರೆ ಅದರಲ್ಲಿ ಮರಿ ಗುಬ್ಬಿಗಳಿವೆ. ಸಂಜೆ ಅವುಗಳ ಅಮ್ಮ ತನ್ನ ಮರಿಗಳಿಗೆ ಆಹಾರ ತೆಗೆದುಕೊಂಡು ಬಂದಾಗ ತನ್ನ ಮರಿಗಳು ಕಾಣದೆ ಅಳುತ್ತದೆ. ಅದನ್ನು ನೋಡುವ ಚೈತನ್ಯ ನನಗಿಲ್ಲ ಅಂದನಂತೆ! ಇದನ್ನು ಕೇಳಿ ಶೇಷನ್ ಮತ್ತು ಅವರ ಪತ್ನಿಗೆ ಶಾಕ್ ಆಯ್ತು.
ಶೇಷನ್ ಹೇಳ್ತಾರೆ, ನನ್ನ ಹುದ್ದೆ, ಐಎಎಸ್ ಎಂಬ ಪವರ್, ಉನ್ನತ ಸ್ಥಾನ ಎಲ್ಲ ಆ ಪುಟ್ಟ ಹುಡುಗನ ಮುಂದೆ ಆವಿಯಾಗ್ಬಿಡ್ತು. ಅವನೆದುರು ನಾನು ತೀರಾ ಕುಬ್ಜನಾಗ್ಬಿಟ್ಟೆ. ನಂತರ ಆ ವಿಷಯವನ್ನು ಅಲ್ಲೇ ಕೈಬಿಟ್ಟು ಅವರು ಹಿಂದಿರುಗಿದರು.
ಶೇಷನ್ ಹೇಳ್ತಾರೆ, ಆ ಘಟನೆ ನಡೆದು ಎಷ್ಟೋ ದಿನಗಳ ನಂತರವೂ ನನ್ನನ್ನು ಅಪರಾಧಿ ಮನೋಭಾವ ಚುಚ್ಚಿಚುಚ್ಚಿ ಕಾಡ್ತಾ ಇತ್ತು. ನಮ್ಮ ಶಿಕ್ಷಣ, ಹುದ್ದೆ, ಸಾಮಾಜಿಕ ಸ್ಥಾನಮಾನ, ಇವು ಯಾವುವೂ ಮಾನವೀಯತೆಯನ್ನು ಅಳೆಯಲು ಅಳತೆಗೋಲಾಗಲ್ಲ.
ನಮಗೆ ಜ್ಞಾನ ಇರೋದು ಪ್ರಕೃತಿಯನ್ನು ಅರ್ಥ ಮಾಡ್ಕೊಳಕ್ಕೆ. ಯಾವುದಕ್ಕೂ ಸ್ಪಂದಿಸದೇ ಬರಿ ಮಾಹಿತಿಗಳನ್ನು ಕಲೆ ಹಾಕುವುದರಿಂದ ಏನೂ ಪ್ರಯೋಜನವಿಲ್ಲ. ನಮ್ಮಲ್ಲಿ ಜ್ಞಾನ, ಸ್ಪಂದನೆ, ಬುದ್ಧಿವಂತಿಕೆ ಇವೆಲ್ಲವೂ ಇದ್ದರೆ ಆಗ ನಮ್ಮ ಜೀವನ ನಿಜಕ್ಕೂ ಆನಂದಮಯ.
*( ಮೂಲ-ವಾಟ್ಸಾಪ್)
ಸೌಜನ್ಯ : ಭೀಮಣ್ಣ ಹುಣಸಿಕಟ್ಟಿ