ಮಂಡ್ಯ :
ಜನರು ಸೊಳ್ಳೆಗಳ ನಿಯಂತ್ರಣದಲ್ಲಿ ಮುತುವರ್ಜಿ ವಹಿಸದಿದ್ದರೆ, ಸೊಳ್ಳೆಗಳ ನಿಯಂತ್ರಣ ಅಸಾಧ್ಯವಾಗುತ್ತದೆ. ಹಾಗಾಗಿ ಸೊಳ್ಳೆಗಳ ನಿಯಂತ್ರಣದಲ್ಲಿ ಜನರ ಪಾತ್ರ ಅತಿ ಮುಖ್ಯವಾಗಿದೆ ಎಂದು ಶಾಸಕ ಪಿ.ರವಿಕುಮಾರ್ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಪ್ರಯುಕ್ತ ಸಂಜಯ ವೃತ್ತದಲ್ಲಿ ಡೆಂಗ್ಯೂ ದಿನಾಚರಣೆಯ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಸೊಳ್ಳೆಗಳ ನಿಯಂತ್ರಣಕ್ಕೆ ಜನರಲ್ಲಿ ಜಾಗೃತಿ ಮೂಡಬೇಕು. ಮನೆಯ ಅಕ್ಕ ಪಕ್ಕದಲ್ಲಿ ನೀರು ನಿಲ್ಲದಿರುವಂತೆ ನೋಡಿಕೊಂಡಾಗ ಸೊಳ್ಳೆ ಉತ್ಪತ್ತಿಯಾಗಲ್ಲ. ಜನರು ಕೂಡ ಆಡಳಿತ ವರ್ಗದವರ ಜತೆ ಕೈಜೋಡಿಸಬೇಕು ಆವಾಗ ಮಾತ್ರ ಮಂಡ್ಯವನ್ನು ಶೂನ್ಯ ಡೆಂಗ್ಯೂ ನಿಯಂತ್ರಣ ಮಾಡಬಹುದು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಕ್ ತನ್ವೀರ್ ಆಸಿಫ್ ಅವರು ಮಾತನಾಡಿ ಸೊಳ್ಳೆಗಳ ಜೀವನ ಚಕ್ರವಾದ ಲಾರ್ವಾ ಉತ್ಪತ್ತಿಯಾಗುವ ಸ್ಥಳಗಳನ್ನು ಗುರುತಿಸುವ ಕಾರ್ಯ ನಿರಂತರವಾಗಿ ನಡೆಯುತ್ತದೆ. ಲಾರ್ವಾ ಉತ್ಪತ್ತಿಯಾಗುವ ಸ್ಥಳಗಳಲ್ಲಿ ಜಾಗೃತಿ ಮೂಡಿಸಿ ಜನರಲ್ಲಿ ಅರಿವು ಮೂಡಿಸಲಾಗುವುದು ಎಂದರು.
ಜಿಲ್ಲೆಯಲ್ಲಿ 78 ಡೆಂಗ್ಯೂ ಪ್ರಕರಣಗಳು ಇದ್ದು, ಇದು ರಾಜ್ಯ ಸರಾಸರಿಯಲ್ಲಿ ಕಡಿಮೆ ಪ್ರಮಾಣದಲ್ಲಿ ಮಂಡ್ಯ ಜಿಲ್ಲೆಇದೆ. ಸಂಪೂರ್ಣವಾಗಿ ಡೆಂಗ್ಯೂ ಮುಕ್ತವಾಗಿ ಮಾಡಬೇಕಿದೆ ಸಾರ್ವಜನಿಕ ಸಹಕಾರ ಮುಖ್ಯ ಎಂದರು.
ಡೆಂಗ್ಯೂ ನಿಯಂತ್ರಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ತಿಂಗಳಿನಲ್ಲಿ ಎರಡು ದಿನ ಮೊದಲನೇ ಶುಕ್ರವಾರ ಮತ್ತು ಎರಡನೇ ಶುಕ್ರವಾರ ನಗರದಲ್ಲಿ ಲಾರ್ವಾ ಸರ್ವೆ ನಡೆಯಲಿದೆ. ಸೊಳ್ಳೆಗಳ ನಿಯಂತ್ರಣಕ್ಕೆ ಜನರು ಸ್ವಯಂ ರಕ್ಷಣಾ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್ ಅವರು ತಿಳಿಸಿದರು.
ಜಾಥದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.