. ಅದು ಹೇಗೆ ಈ ಒಬ್ಬ ಹಾಡುಗಾರ ಆಂದ್ರ ತೆಲಂಗಾಣ ಮಾತ್ರವಲ್ಲದೆ ದೇಶದಾದ್ಯಂತ ಜನಜನಿತರಾದರು? ನೆನ್ನೆ ಮೂರು ಗಂಟೆಗೆ ‘ಗದ್ದರ್’ ಇನ್ನಿಲ್ಲ ಎಂಬ ಸುದ್ದಿ ಕೇಳಿ ಕೋಟ್ಯಂತರ ಜನ ಕಣ್ಣೀರಿಟ್ಟರು. ಅವರೇನೂ ರಾಜಕಾರಣಿಯಲ್ಲ, ದೊಡ್ಡ ಸಿನಿಮಾ ತಾರೆಯೂ ಅಲ್ಲ.. ಆದರೂ ಇಶ್ಟೊಂದು ಜನಪ್ರೀತಿ ಗಳಿಸಿದ್ದಾದರೂ ಹೇಗೆ?

1998ನೇ‌ ಇಸವಿ. ನಾನಾಗ ಪಿಯುಸಿ ಯನ್ನು ಶಿವಮೊಗ್ಗದಲ್ಲಿ ಓದಲು ಹೋಗಿದ್ದೆ. ನಾನಿದ್ದ ಹಾಸ್ಟೆಲ್ ನಲ್ಲಿ ಪಿವಿಕೆ ಎಂಬ ವಿದ್ಯಾರ್ತಿ ಸಂಗಟನೆಯ ಮೂಲಕ ಗದ್ದರ್ ವಿಚಾರ ತಿಳಿದುಬಂತು. ಆಗಶ್ಟೇ ಆಂದ್ರದಲ್ಲಿ ಗದ್ದರ್ ಮೇಲೆ ಗುಂಡಿನ ದಾಳಿ ನಡೆದಿತ್ತು. ಗ್ರೇಹೌಂಡ್ಸ್ ಎಂಬ ಪೊಲೀಸ್ ಪಡೆ ತನ್ನ ಮೇಲೆ ದಾಳಿ ನಡೆಸಿದೆಯೆಂದು ಗದ್ದರ್ ಆರೋಪಿಸಿದ್ದರು. ಆ ದಾಳಿಯಲ್ಲಿ ಗದ್ದರ್ ಬದುಕಿ ಉಳಿದಿದ್ದೇ ಪವಾಡ. ಅವರ ದೇಹವನ್ನು ಹೊಕ್ಕ ಎರಡು ಬುಲೆಟ್ ಗಳಲ್ಲಿ ಒಂದು ಗುಂಡನ್ನು ಅಪರೇಶನ್ ಮಾಡಿ ಹೊರತೆಗೆದಿದ್ದರು. ಮತ್ತೊಂದು ಗುಂಡು ಅವರ ಗುಂಡಿಗೆಯ ಪಕ್ಕದಲ್ಲೇ ದೀರ್ಗಕಾಲ ಅವರ ಹಾಡು ಕೇಳಿಕೊಂಡೇ ಕುಳಿತಿತ್ತು. ಈ ಗಟನೆ ನಡೆದ ಕೆಲ ದಿನಗಳಲ್ಲಿ ಶಿವಮೊಗ್ಗದಲ್ಲಿ ಒಂದು ಕಾರ್ಯಕ್ರಮಕ್ಕೆ ಗದ್ದರ್ ಬಂದಿದ್ದರು. ರಾಜ್ಯದ ಮೂಲೆ ಮೂಲೆಗಳಿಂದ ಜನರು ಗದ್ದರ್ ನೋಡಲು ಬಂದಿದ್ದರು.. ಗದ್ದರ್ ತಮ್ಮ ಈ ಹೆಸರನ್ನು ಬಾರತದ ಸ್ವಾತಂತ್ರ್ಯಕ್ಕಾಗಿ ಅಮೆರಿಕದ ಬಾರತೀಯರು ಕಟ್ಟಿದ್ದ ಗದರ್ ಸಂಗಟನೆಯ ನೆನಪಿನಲ್ಲಿ ಇಟ್ಟುಕೊಂಡಿದ್ದರು.
ಗದ್ದರ್ ಅವರನ್ನೇ ಅನುಕರಿಸಿ ಹಾಡುವ ಅದೆಶ್ಟೋ ಜನರು ಕರ್ನಾಟಕದಲ್ಲೇ ಇದ್ದರು. ನಮ್ಮೂರಿನಲ್ಲೇ ಗೋಪಾಲಣ್ಣ ಎಂಬ ಹಾಡುಗಾರ ಮಲೆನಾಡಿನ ಗದ್ದರ್ ಎಂದು ಪ್ರಸಿದ್ದನಾಗಿದ್ದ. ನಾನು ಊರಿಗೆ ಹೋದಾಗ ಗೋಪಾಲಣ್ಣ ಮತ್ತು ನಾನು ಹೆಚ್ಚು ಚರ್ಚೆ ಮಾಡುತ್ತಿದುದು ಗದ್ದರ್ ಹಾಡುಗಳ ಕುರಿತೇ ಆಗಿತ್ತು. ನಂತರ ಅವನು ಹೃದಯಾಗಾತದಿಂದ ತೀರಿಕೊಂಡುಬಿಟ್ಟ.‌ ಅದೇ ರೀತಿ ಈಸೂರು ಲೋಕೇಶ್ ಎಂಬ ಹೋರಾಟಗಾರ ಗದ್ದರ್ ತರವೇ ಗೆಜ್ಜೆಕಟ್ಟಿಕೊಂಡು ಹೆಗಲಿಗೆ ಕಂಬಳಿ ಹೊದ್ದು ಗದ್ದರ್ ಶೈಲಿಯಲ್ಲಿ ಹಾಡುವುದನ್ನು ನಾನು ಪ್ರೈಮರಿ ಓದುವಾಗಲೇ ಕಂಡಿದ್ದೆ.

ಗದ್ದರ್ ಈ ಮಟ್ಟಿಗೆ ಪ್ರಸಿದ್ದರಾಗಲು ಕಾರಣ 80 ರ ದಶಕದಲ್ಲಿ ಆಂದ್ರ-ತೆಲಂಗಾಣದಲ್ಲಿ ಹಳ್ಳಿಹಳ್ಳಿಗೆ ತಲುಪಿದ್ದ ನಕ್ಸಲೀಯರ ಚಳವಳಿ. ಆಗ ನಕ್ಸಲೀಯರು ಕೊಂಡಪಲ್ಲಿ ಸೀತಾರಾಮಯ್ಯ ನೇತೃತ್ವದಲ್ಲಿ ತಮ್ಮ ಉಗ್ರಮಾದರಿ ಹೋರಾಟದಲ್ಲಿ ಬದಲಾವಣೆ ಮಾಡಿಕೊಂಡಿದ್ದರು. ಕಾನೂನುಬದ್ದ ಹೋರಾಟಗಳು ಮತ್ತು ಸಂಗಟನೆಗಳನ್ನು ವ್ಯಾಪಕವಾಗಿ ಕಟ್ಟತೊಡಗಿದ್ದರು. ರ‌್ಯಾಡಿಕಲ್ ಸ್ಟುಡೆಂಟ್ಸ್ ಯೂನಿಯನ್ ಎಂಬ ವಿದ್ಯಾರ್ತಿ ಸಂಗಟನೆ ಆಂದ್ರದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆದಿತ್ತು. ಆಗ ಗದ್ದರ್ ಹಾಡುತ್ತಿದ್ದ ಹಾಡುಗಳನ್ನು ಈ ವಿದ್ಯಾರ್ತಿಗಳು ಗುನುಗುಡತೊಡಗಿದ್ದರು. ಬೇಸಗೆ ರಜೆಯಲ್ಲಿ ಈ ವಿದ್ಯಾರ್ತಿಗಳು ಸಾವಿರ ಸಾವಿರ ಸಂಕ್ಯೆಯಲ್ಲಿ ಆಂದ್ರ ತೆಲಂಗಾಣದ ಹಳ್ಳಿಹಳ್ಳಿಗಳಿಗೆ ಹೋಗಿ ಗದ್ದರ್ ಜನಪ್ರಿಯಗೊಳಿಸಿದ್ದ ಹಾಡುಗಳನ್ನು ಹಾಡಿ ತಮ್ಮ ಸಂಗಟನೆಗೆ ರೈತಕೂಲಿಗಳನ್ನು ಆಕರ್ಶಿಸುತ್ತಿದ್ದರು. ಇದು ಗದ್ದರ್ ಹಾಡುಗಳನ್ನು ಜನಪ್ರಿಯಗೊಳಿಸಿದ ಮತ್ತೊಂದು ಸಂಗತಿ. ಆ ವಿದ್ಯಾರ್ತಿ ಸಂಗಟನೆ ನಿಶೇದಕ್ಕೊಳಪಟ್ಟಾಗ ಅದರ ಪ್ರಬಾವ ಕುಗ್ಗಿತು. ಅದರ ಕಾರ್ಯಕರ್ತರೇ ಮುಂದೆ ನಕ್ಸಲರ ದೊಡ್ಡ ನಾಯಕರಾದರು.
ವಾರಂಗಲ್ ನಲ್ಲಿ ನಡೆದ ಒಂದು ಜನಸಮಾವೇಶದಲ್ಲಿ ಸುಮಾರು ಹತ್ತು ಲಕ್ಷ ಜನರು ಸೇರಿದ್ದರೆಂದು ಹೇಳಲಾಗುತ್ತದೆ. ಆ ಸಮಾವೇಶದ ಕೇಂದ್ರ ಆಕರ್ಶಣೆಯೇ ಗದ್ದರ್ ಅವರ ವೀರಗುಣಿತ ಮತ್ತು ಹಾಡುಗಳು. ಆಂದ್ರದ ಮೂಲೆಮೂಲೆಗಳಲ್ಲಿ ಜನರು ಗದ್ದರ್ ಹಾಡುಗಳನ್ನು ಹಾಡತೊಡಗಿದ್ದರು. ಕರ್ನಾಟಕ- ಆಂದ್ರ ಗಡಿಜಿಲ್ಲೆಗಳಲ್ಲಿ ಆಗ ಡಿಎಸ್ಎಸ್ ಪ್ರಬಲವಾಗಿತ್ತು. ಅದರ ಮೂಲಕ ಗದ್ದರ್ ಹಾಡುಗಳು ಕನ್ನಡಕ್ಕೂ ಬಂದವು. ರಾಯಚೂರಿನ Ambanna Arolikar ಮುಂತಾದವರು ಗದ್ದರ್ ಅವರ ಜನನಾಟ್ಯ ಮಂಡಳಿ ತರದಲ್ಲೇ ಜನಕಲಾ ಮಂಡಳಿ ಎಂದು ಮಾಡಿಕೊಂಡು ಅದೇ ಶೈಲಿಯಲ್ಲಿ ಹಾಡತೊಡಗಿದ್ದರು. ಹೀಗೆ ಗದ್ದರ್ ಕನ್ನಡಿಗರನ್ನೂ ಪ್ರಬಾವಿಸತೊಡಗಿದ್ದರು. ನಾನಂತೂ ಗದ್ದರ್ ಹಾಡುಗಳ ಏಳೆಂಟು ಕ್ಯಾಸೆಟ್ಟುಗಳನ್ನು ಊರಿಗೆ ಕೊಂಡೊಯ್ದು ಟೇಪ್ ರೆಕಾರ್ಡಿರಿನಲ್ಲಿ ಹಾಕಿಕೊಂಡು ದಿನಗಟ್ಟಲೆ ಕೇಳುತ್ತಿದ್ದೆ. ಆ ದಿನಗಳಲ್ಲಿ ಗದ್ದರ್ ಅವರಿಂದ ನಾನು ಪಡೆದ ದೊಡ್ಡ ಅರಿವು ಏನೆಂದರೆ ಈ ದೇಶದ ನಿಜವಾದ ಸಂಸ್ಕೃತಿ ಇರುವುದು ತಳಸಮುದಾಯಗಳ ದಿನನಿತ್ಯದ ಬದುಕಿನ ಹಾಡು ಪಾಡು ದುಕ್ಕ ದುಮ್ಮಾನಗಳಲ್ಲಿ, ಹಸಿವಿನ ನೋವು ಹೋರಾಟಗಳಲ್ಲಿಯೇ ಹೊರತು ಸೊಪೆಸ್ಟಿಕೇಟೆಡ್ ಸಂಗೀತ ಕಚೇರಿಗಳಲ್ಲೋ, ಹೊಟ್ಟೆ ತುಂಬಿಕೊಂಡವರು ಸುಶ್ರಾವ್ಯವಾಗಿ ರಾಗ ತಾಳ ಪೋಣಿಸಿಕೊಂಡು ಮಾಡುವ ಕಾಲಹರಣದಲ್ಲಿ ಅಲ್ಲ ಎನ್ನುವುದು.

ಏನು ಗದ್ದರ್ ಹಾಡುಗಾರಿಕೆಯ ವಿಶೇಶ?
ಗದ್ದರ್ ಹಾಡುಗಳ ವಿಶೇಶತೆ ಏನೆಂದರೆ ಅವುಗಳಲ್ಲಿ ಆಂದ್ರದ ಜಾನಪದ ಪ್ರಕಾರಗಳನ್ನು ಸೃಜನಶೀಲವಾಗಿ ಅಳವಡಿಸಿಕೊಂಡ ಪರಿ. ಉಗ್ಗುಕತಾ, ಬುರ್ರಕತಾ ಪ್ರಕಾರಗಳ ಮೂಲಕ ಗದ್ದರ್ ಕ್ರಾಂತಿಗೀತೆಗಳನ್ನು ಹಾಡಿದ್ದು ಜನರ ಎದೆಗೆ ಇಳಿಯತೊಡಗಿತ್ತು. ಹಾಡಿನಶ್ಟೇ ಪರಿಣಾಮಕಾರಿಯಾಗಿ ಇವರ ಸರಳ ನಿರೂಪಣೆ ಇತ್ತು. ಒಮ್ಮೆ ಗದ್ದರ್ ಆಹಾ…. ಎಂದು ರಾಗವಾಗಿ ಹೇಳಿದರೆ ನೆರೆದ ಲಕ್ಷ ಲಕ್ಷ ಜನರು ಒಕ್ಕೊರಲಿನಿಂದ ಓಹೋ ಎನ್ನುತ್ತಿದ್ದರು. ಗದ್ದರ್ ಹಾಡಿಗೆ ಅದ್ಬುತ ತಮಟೆ ವಾದನದ ಸೊಗಸು ಕೇಳುಗರೆದೆಯಲ್ಲಿ ಕಂಪನ ಮೂಡಿಸುತ್ತಿತ್ತು. ತಮಟೆಯ ಕುರಿತೇ ಅದ್ಭುತವಾಗಿ ಹಾಡುತ್ತಿದ್ದರು. “ಇದು ದಪ್ಪುಲು ತಪ್ಪುಲು ಕಾದು ದಲಿತ ಪುಲುಲು….” ಎಂದು ಗದ್ದರ್ ಅಬ್ಬರಿಸಿದರೆ ಎದೆ ಜಲ್ ಎನ್ನುತ್ತಿತ್ತು.
ಗದ್ದರ್ ತಮ್ಮ ಹಾಡುಗಳ ಮೂಲಕ ಸಮಾಜದ ಶ್ರಮಿಕರನ್ನು ತಲುಪಿದರು. ‘ನಾವ್ ವಡ್ಡರೋಳ್ಳ ಮಂದಿ ಮೇಮು… . ಅನ್ನುವ ಹಾಡು ಕಲ್ಲು ಒಡೆದು ನೆಲ ಅಗೆದು ರಸ್ತೆ ಡ್ಯಾಮು ಕಟ್ಟುವ ಜನರಲ್ಲಿ ಎಂತಹ ಆತ್ಮವಿಶ್ವಾಸ ಮೂಡಿಸುತ್ತಿತ್ತು ಎಂದು ಯೋಚಿಸಬಹುದು. ಹಾಗೇ ಗ್ಯಾಂಗೋಳ್ಳ ಮಂಡಿ ಮೇಮ್ ಬಾಬೋ… ಅನ್ನೋ ಹಾಡು ರೈಲ್ವೆ ಹಳಿಯ ಮೇಲೆ ಕೆಲಸ ಮಾಡುವ ಜನರ ಸ್ವಾಬಿಮಾನಿ ಗೀತೆಯಾಗಿತ್ತು. ಆಂದ್ರದಲ್ಲಿ ಕಾರಂಚೇಡು ದಲಿತ ಹತ್ಯಾಕಾಂಡವಾದಾಗ ಅಲ್ಲಿಯ ಮಾವೋವಾದಿಗಳು ದೊಡ್ಡ ಚಳವಳಿ ಕಟ್ಟಿದರು. ಕೊನೆಗೆ ಜನತಾ ನ್ಯಾಯಾಲಯ ನಡೆಸಿ ದಲಿತರ ಹತ್ಯೆ ಮಾಡಿದ್ದವರಿಗೆ ತಾವೇ ಕಾನೂನು ಕೈಗೆತ್ತಿಕೊಂಡು ಶಿಕ್ಷೆ ವಿದಿಸಿದರು. ಆ ಇಡೀ ಪ್ರಕರಣವನ್ನು ಗದ್ದರ್ ತಮ್ಮದೇ ಬುರ್ರಕತಾ ಶೈಲಿಯಲ್ಲಿ ಹಾಡಿದ, “ಕಾರಂಚೇಡು ಬೂಸ್ವಾಮುಲ ಮೀದ ಕಲಬಡಿ ನೆಲಬಡಿ ಪೋರು ಚೇಸಿನಾ….ದಲಿತ ಪುಲುಲಲಮ್ಮಾ…‘ ಎಂಬ ಕತನ ಗೀತೆ ಯಾವ ಸೋಶಲ್ ಮೀಡಿಯಾಗಳೂ ಇಲ್ಲದ ಆದಿನಗಳಲ್ಲೇ ಬಾಯಿಂದ ಬಾಯಿಗೆ ಹರಡಿ ವೈರಲ್ ಆಗಿತ್ತು. ಆ ಹಾಡು ದಲಿತ ಸಮುದಾಯದಲ್ಲಿ ನೀಡಿದ ಆತ್ಮಸ್ತೈರ್ಯ ಬಹಳ ದೊಡ್ಡದು.
ಇನ್ನು ಗದ್ದರ್ ಪೊಲೀಸ್ ಪೇದೆಗಳ ಬಗೆಗೆ ಹಾಡಿದರು. “ನಾಸಾ ಕಿಂದ ಮೀಸಾ ಕಿಂದ ನನ್ನೂ ಜೈಲು ಬೆಟ್ಟಿನಾರು.. ನೀಕೂ ನಾಕು ಬೇದಮಿಲ್ಲಯೋ” ಎಂಬ ಹಾಡು ಕಾನ್ ಸ್ಟೇಬಲ್ ಗಳ ಕುರಿತು ಎಂಪತಿ ಮೂಡಿಸುವಂತಿತ್ತು. ಇನ್ನು ಎನ್ ಕೌಂಟರುಗಳು ಆಂದ್ರದಲ್ಲಿ ತೀರಾ ಸಾಮಾನ್ಯವಾಗಿಬಿಟ್ಟವು. ಎನ್ ಕೌಂಟರಿನಲ್ಲಿ ನಕ್ಸಲೀಯರ ಸಾವು, ಎನ್ ಕೌಂಟರ್ ಪೊಲೀಸರ ಸಾವು ಎಂಬ ಸುದ್ದಿಗಳು ದಿನನಿತ್ಯದ ಮಾತಾದವು. ಹೀಗೆ ಸಾವಿಗೀಡಾದ ನಕ್ಸಲೀಯರ ಕುರಿತು ಗದ್ದರ್ ಬಾವುಕರಾಗಿ ಹಾಡುತ್ತಿದ್ದ ಹಾಡುಗಳು ಉಂಟು ಮಾಡಿದ ಪರಿಣಾಮ ವ್ಯಾಪಕವಾಗಿತ್ತು. ಸತ್ತ ನಕ್ಸಲೀಯರನ್ನು ಒಂದು ಬಗೆಯಲ್ಲಿ ದೈವತ್ವಕ್ಕೇರಿಸುವ ಕೆಲಸಗಳನ್ನು ಗದ್ದರ್ ಹಾಡುಗಳು ಮಾಡಿದವು. ಅವುಗಳಲ್ಲಿ ಕಾಮ್ರೇಡ್ ಸ್ವರ್ಣ ಎನ್ನುವ ವಿದ್ಯಾರ್ತಿ ನಾಯಕಿ, ಬೆಳ್ಳಿ ಲಲಿತಾ, ಶ್ರೀಕಾಕುಳಂ ನ ಸತ್ಯಂ ಕೈಲಾಸಂ ಮೊದಲಾದವರ ಕುರಿತು ಗದ್ದರ್ ಹಾಡುಗಳನ್ನು ಕೇಳುತ್ತಾ ಕಣ್ಣೀರಿಡದವರು ವಿರಳ. ಕರ್ನಾಟಕದ ಪಾರ್ವತಿ ಹಾಜಿಮಾ ಕುರಿತೂ ಗದ್ದರ್ ಹಾಡು ಕಟ್ಟಿ ಜನರನ್ನು ಗದ್ಗದಿತರಾಗಿಸಿದ್ದರು. ನಕ್ಸಲೀಯರ ಸಂಗಟನೆಯಲ್ಲಿ ನಾಯಕತ್ವ ವಹಿಸುತ್ತಿದ್ದುದು ಹೆಚ್ಚಾಗಿ ರೆಡ್ಡಿ, ಬ್ರಾಮಣರಾದರೂ ಇಡೀ ನಕ್ಸಲೀಯ ಹೋರಾಟ ತಳಸಮುದಾಯಗಳ ದಲಿತ ರೈತ ಕೂಲಿಗಳ ಹೋರಾಟವಾಗಿ ಬಿಂಬಿತವಾದದ್ದು ಮುಕ್ಯವಾಗಿ ದಲಿತ ಪ್ರತಿಬೆ ಗದ್ದರ್ ಅವರಿಂದಲೇ ಎನ್ನಬಹುದು.

ನಕ್ಸಲ್ ಹೋರಾಟ ದೊಡ್ಡ ಮಟ್ಟದ ಹಿನ್ನಡೆ ಕಂಡಿದ್ದು ಚಂದ್ರಬಾಬು ನಾಯ್ಡು ಅವದಿಯಲ್ಲಿ. ವರ್ಷಕ್ಕೆ ಮುನ್ನೂರು ನಾನ್ನೂರು ನಕ್ಸಲ್ ಕಾರ್ಯಕರ್ತರು ಮತ್ತು ನಾಯಕರನ್ನು ಆಂದ್ರ ಪೊಲೀಸರು ಮೂರು ನಾಲ್ಕು ವರ್ಶಗಳ ಕಾಲ ಕೊಂದುಹಾಕಿದರು. ನಕ್ಸಲೀಯರೂ ಅಷ್ಟೇ ಮೊಂಡಾಗಿ ತಮ್ಮ ದಾರಿಯಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದೇ ಹೋದರು. ತಮ್ಮ ಜನಪ್ರಿಯತೆಯ ಹೊತ್ತಲ್ಲಿ ನಕ್ಸಲೀಯರೇನಾದರೂ ಚುನಾವಣೆಗಳಲ್ಲಿ ಬಾಗವಹಿಸಿದ್ದೇ ಆದಲ್ಲಿ ತೆಲಂಗಾಣ, ಜಾರ್ಕಂಡ್, ಚತ್ತೀಸ್ ಗಡ ರಾಜ್ಯಗಳಲ್ಲಿ ಅವರೇ ಅದಿಕಾರ ಹಿಡಿದಿರುತ್ತಿದ್ದರು ಮಾತ್ರವಲ್ಲ ಲೋಕಸಬೆಯಲ್ಲಿ ಕನಿಶ್ಟ 60-70 ಸಂಸದರನ್ನು ಹೊಂದಿರುತ್ತಿದ್ದರು.
ತೆಲಂಗಾಣ ಪ್ರತ್ಯೇಕ ರಾಜ್ಯದ ಹೋರಾಟ ದೊಡ್ಡ ಮಟ್ಟದಲ್ಲಿ ಶುರುವಾದಾಗ ಅದಕ್ಕೆ ತಮ್ಮ ಹಾಡುಗಾರಿಕೆಯ ಬಲ ನೀಡಿದ್ದು ಗದ್ದರ್‌ . ಮತ್ತೊಮ್ಮೆ ಗದ್ದರ್ ಜನಪ್ರಿಯತೆಯ ಉತ್ತುಂಗ ತಲುಪಿದರು. ‘ಪೊಡುಸ್ತುನ್ನ ಪೊದ್ದುಮೀದ ನಡುಸ್ತುನ್ನ ಕಾಲಮಾ ಪೋರು ತೆಲಂಗಾಣಮಾ…ಅಮ್ಮಾ ತೆಲಂಗಾಣಮಾ ಆಕಲಿ ಕೇಕಲ ಗಾನಮಾ‘ ಎಂಬ ಹಾಡುಗಳು ಇಡೀ ಹೋರಾಟಕ್ಕೆ ಸ್ಪೂರ್ತಿ ತುಂಬಿದವು. ಗದ್ದರ್ ಅವರ ವಿಶೇಶ ಶಕ್ತಿಯೆಂದರೆ ಸ್ತಳದಲ್ಲೇ ಪಲ್ಲವಿಗಳನ್ನು ರಚಿಸಿ ಹಾಡಬಲ್ಲ ಅವರ ಅದ್ಬುತ ಪ್ರತಿಬೆ.

ಹೀಗೆ ದಶಕಗಳ ಕಾಲ ತನ್ನ ಕಂಚಿನ ಕಂಟ, ಅದ್ಬುತ ಮಾತುಗಾರಿಕೆ, ರಾಗ ದನಿಗಳಿಂದ ಸೂಜಿಗಲ್ಲಿನಂತೆ ಜನರನ್ನು ಸೆಳೆಯುತ್ತಾ ಕೇಳುಗರೆದೆಯಲ್ಲಿ ಕಂಪನದ ಅಲೆಗಳನ್ನು ಉಂಟು ಮಾಡುತ್ತಿದ್ದ ಗದ್ದರ್ ಉಸಿರು ನಿಂತುಹೋಗಿದೆ.

ಕಡೆಗಾಲದಲ್ಲಿ ಕೆಲವು ಅಸಂಬದ್ದ ನಡೆಗಳ ಮೂಲಕ ಅವರ ಕೋಟ್ಯಂತರ ಅಬಿಮಾನಿಗಳನ್ನು ಗದ್ದರ್ ಗಾಸಿಗೊಳಿಸಿದರು. ಮಾನಸಿಕ ಸ್ತಿಮಿತತೆ ಕಳೆದುಕೊಂಡಿದ್ದರೋ, ರಾಜಕೀಯ ದೌರ್ಬಲ್ಯಕ್ಕೆ ಒಳಗಾಗಿದ್ದರೋ ಗೊತ್ತಿಲ್ಲ. ಚಳವಳಿಗಳಲ್ಲಿ ಇದೇನೂ ಹೊಸದಲ್ಲ. ನಮ್ಮ ನಾಡಿನ ದಲಿತ ಕವಿ ಸಿದ್ದಲಿಂಗಯ್ಯ, ಇತ್ತೀಚೆಗೆ ಎನ್ ಮಹೇಶ್… ಹೀಗೆ ಕಾಣುತ್ತಲೇ ಇದ್ದೇವಲ್ಲ…

ಆದರೆ ಹೇಗೆ ಸಿದ್ದಲಿಂಗಯ್ಯ ಎಂದೊಡನೆ ನೆನ್ನೆ ದಿನಾ ನನ್ನ ಜನಾ, ಗುಡಿಸಲಿನಲ್ಲಿ ಅರಳುವ ಗುಲಾಬಿ, ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ ನೆನಪಾಗುತ್ತವೆಯೋ ಹಾಗೆ ಇವತ್ತಿಗೂ ಗದ್ದರ್ ಹೆಸರು ನೆನಪಾದರೆ ಮನದಲ್ಲಿ ಮೂಡುವುದು ಹೆಗಲ ಮೇಲೆ ಕೆಂಪು ಶಾಲು ಹೊದ್ದು, ಕೈಯಲ್ಲಿ ಕೆಂಪುಬಣ್ಣದ ಬಟ್ಟೆ ಹಿಡಿದು ಮತ್ತೊಂದು ಕೈಯಲ್ಲಿ ಒಂದು ಕೋಲು ಹಿಡಿದು…. ಆಹಾ…… ಎಂದು ರಾಗವಾಗಿ ಹೇಳುವ ದೃಶ್ಯ…. ಬಾವುಟವನ್ನು ಮೇಲೆಕ್ಕೆ ಹಾರಿಸಿ ನೆಗೆದು ಹಿಡಿದುಕೊಂಡು ಹಾ… ಎಂದು ಹೂಂಕರಿಸುವ ದೃಶ್ಯ ನೆನಪಾಗುತ್ತದೆ;
‘ನನ್ನೂಗನ್ನ ತಲ್ಲೂಲಾರ ತೆಲುಗುತಲ್ಲಿ ಪಲ್ಲೇಲಾರ
ಪಾಟನೈ ವಸ್ತುನ್ನಾನಮ್ಮೋ ಮಾ ಯಮ್ಮಾಲಾರ
ಪಾದಾಲಕು ವಂದಾನಲಮ್ಮೋ ಮಾಯಮ್ಮಾಲಾರ
ಎಂಬ ಹಾಡು ನೆನಪಾಗಿ ಕಂಬನಿದುಂಬುತ್ತದೆ.

ನಿಮಗೆ ವಂದನೆಗಳು ಗದ್ದರ್, ಜೋಹಾರುಲು

ಹರ್ಶಕುಮಾರ್ ಕುಗ್ವೆ

(ಈ ಬರೆಹದಲ್ಲಿ ಮಹಾಪ್ರಾಣ ಅಕ್ಶರಗಳನ್ನು ಬಳಸಿರುವುದಿಲ್ಲ)

LEAVE A REPLY

Please enter your comment!
Please enter your name here