ಮಂಗಳೂರಿನ ಪ್ರತಿಷ್ಠಿತವೆಂದು ಕರೆಸಿಕೊಳ್ಳುವ ಎ.ಜೆ ಆಸ್ಪತ್ರೆಗೆ ಹೆರಿಗೆಗೆಂದು ದಾಖಲಾಗಿರುವ ಗರ್ಭಿಣಿ ಹೆಣ್ಣುಮಗಳೊಬ್ಬಳು ಆಸ್ಪತ್ರೆಯ ಬೇಜವಬ್ದಾರಿ ಮತ್ತು ವೈದ್ಯರ ನಿರ್ಲಕ್ಷಕ್ಕೆ ಬಲಿಯಾಗಿದ್ದಾರೆ. ಹೆರಿಗೆಗಾಗಿ ನಡೆದ ಶಸ್ತ್ರಚಿಕಿತ್ಸೆಯಿಂದಾದ ಎಡವಟ್ಟಿಗೆ ಗರ್ಭಕೋಶವನ್ನು ಕಳೆದುಕೊಂಡಿದ್ದಲ್ಲದೆ ಮೆದುಳು ನಿಷ್ಕ್ರಿಯಗೊಂಡು ಕೋಮಕ್ಕೆ ತೆರಳಿದ್ದಾರೆ.
ವೇಣೂರಿನ ಶಿಲ್ಪಾ ಅನ್ನುವ ಗರ್ಭಿಣಿ ಹೆಣ್ಣುಮಗಳೊಬ್ಬಳು ತನ್ನ ಎರಡನೇ ಮಗುವಿನ ಹೆರಿಗೆಗಾಗಿ ಜುಲೈ 2 ರಂದು ಎ.ಜೆ ಮೆಡಿಕಲ್ ಕಾಲೇಜಿನ ಆಸ್ಪತ್ರೆಗೆ ದಾಖಲಾಗುತ್ತಾರೆ. ಹೆರಿಗೆಗೆ ಮೊದಲು ಕಳೆದ ಒಂಬತ್ತು ತಿಂಗಳು ಎಲ್ಲಾ ರೀತಿಯ ವೈದ್ಯಕೀಯ ಪರೀಕ್ಷೆಗಳನ್ನು ಇಲ್ಲೇ ನಡೆಸಿರುತ್ತಾರೆ. ಆರ್ಥಿಕವಾಗಿ ಹಿಂದುಳಿರುವ ಕುಟುಂಬ ಇಲ್ಲಿ ಉಚಿತ ಚಿಕಿತ್ಸೆ ಸಿಗುತ್ತದೆಂಬ ಕಾರಣಕ್ಕೆ ಎ.ಜೆ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ( ಉಚಿತದ ಹೆಸರಲ್ಲಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಯೋಗಕ್ಕಾಗಿ ಬಡವರ ದೇಹವನ್ನು ಬಳಸುವುದು ಮತ್ತು ಸರಕಾರದ ಉಚಿತ ಯೋಜನೆಗಳ ಸ್ಕೀಮ್ ಗಳನ್ನು ಲೂಟಿ ಹೊಡೆಯುವುದರ ಉದ್ದೇಶ ಅಡಗಿದೆ).
ಮನೆಮಂದಿಯ ಹೇಳಿಕೆಯ ಪ್ರಕಾರ ಜುಲೈ 2 ರಂದು ಹೆರಿಗೆ ನೋವು ಬಂದ ಹಿನ್ನಲೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಈ ವರೆಗೆ ಪರೀಕ್ಷಿಸುತ್ತಿದ್ದ ವೈದ್ಯರಿಗೆ ಕರೆ ಮಾಡಿದಾಗ ಇವತ್ತು ಆದಿತ್ಯವಾರ ನಾನು ಬರೋದಿಲ್ಲ ಬೇರೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡುತ್ತಾರೆಂದು ತಿಳಿಸಲಾಗುತ್ತೆ. ಶಸ್ತ್ರಚಿಕಿತ್ಸೆ ಮೂಲಕ ಹೆಣ್ಣು ಮಗು ಆರೋಗ್ಯವಾಗಿ ಹುಟ್ಟುತ್ತದೆ. ನಂತರ ಅವಳ ಗರ್ಭಕೋಶದಲ್ಲಿ ಕಸ ಅಂಟಿಕೊಂಡಿರುತ್ತೆ ಅದನ್ನು ತೆಗೆಯಲೆಂದು ಪ್ರಯತ್ನ ಪಟ್ಟಾಗ ಬ್ಲೀಡಿಂಗ್ ಪ್ರಾರಂಭವಾಗುತ್ತೆ. ದೇಹದಲ್ಲಿ ರಕ್ತದೊತ್ತಡದ ಏರಿಳಿತದಿಂದ ಪೀರ್ಸ್ ಪ್ರಾರಂಭವಾಗಿ ಅದನ್ನು ನಿಯಂತ್ರಿಸಲು ಪ್ರಯತ್ನಿಸುವ ಸಂದರ್ಭದಲ್ಲೇ ಮೆದುಳು ನಿಷ್ಕ್ರಿಯಗೊಂಡು ಕೋಮಕ್ಕೆ ತೆರಳುತ್ತಾರೆ. ಕೊನೆಗೆ ಇನ್ನೂ ಯಾವತ್ತೂ ಸರಿಹೊಂದದ ಸ್ಥಿತಿಗೆ ಬಂದು ತಲುಪುತ್ತಾರೆ. ಕಳೆದ 9 ದಿನಗಳಿಂದ ಮನೆಮಂದಿ ಆ ಹೆಣ್ಣುಮಗಳು ಗುಣಹೊಂದಲೆಂದು ಪಡುವ ಯಾತನೆಯನ್ನು ಹೇಳಲು ಸಾಧ್ಯವಿಲ್ಲ. ಆಸ್ಪತ್ರೆ ಈ ವರೆಗೂ ಸರಿಯಾದ ಮಾಹಿತಿಯನ್ನು ಒದಗಿಸದೆ ಚಿಕಿತ್ಸೆಗಾಗಿ ಸರಕಾರದ ಸ್ಕೀಮ್ ಗಳಿಂದ ಲಭ್ಯವಾಗದ ದುಬಾರಿ ಶುಲ್ಕದ ಮದ್ದುಗಳನ್ನು ಹೊರಗಿನಿಂದ ತರಿಸಿ ಲೂಟಿ ಹೊಡೆಯುವ ಕಾಯಕದಲ್ಲೇ ನಿರತರಾಗಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿದು ಮನೆ ಮಂದಿಯ ಜೊತೆ ಮಾತನಾಡಿದೆ. ಆ ಹೆಣ್ಣು ಮಗಳಿಗಾದ ಅನ್ಯಾಯದ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಕರೆ ಮಾಡಿ ಮಾತನಾಡಿದಾಗ ಆಗಲೇ ಆಸ್ಪತ್ರೆ ಆಡಳಿತ ಅವರಿಗೆ ಮಾಹಿತಿ ಒದಗಿಸಿದೆ. ಸಂಬಂಧಪಟ್ಟ ವೈದ್ಯರಿಗೆ ಕರೆ ಮಾಡಿದ ಅರ್ಧ ಗಂಟೆಯೊಳಗೆ ಆಸ್ಪತ್ರೆ ಆಡಳಿತ ಸಭೆಯನ್ನು ಕರೆದು ಮನೆಮಂದಿ ಜೊತೆ ಮಾತುಕತೆ ನಡೆಸಿ ಆಸ್ಪತ್ರೆ ಮತ್ತು ವೈದ್ಯರ ಕಡೆಯಿಂದ ಏನೂ ಸಮಸ್ಯೆಗಳಾಲಿಲ್ಲ ಈಗಾಗಿರುವ ಬಗ್ಗೆ ಕಣಿಕರ ವ್ಯಕ್ತ ಪಡಿಸಿ ಅವರನ್ನು ಸಮಾಧಾನ ಪಡಿಸುವ ಮೂಲಕ ಸಮಸ್ಯೆಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಹಾಗಾದರೆ ಆರೋಗ್ಯವಂತ ಗರ್ಭಿಣಿ ಹೆಣ್ಣು ಮಗಳ ಮೇಲಾದ ಅನ್ಯಾಯಕ್ಕೆ ಹೊಣೆ ಯಾರು? ತಂತ್ರಜ್ಞಾನ ಮುಂದುವರಿದ ಕಾಲಘಟ್ಟದಲ್ಲಿ ಎಲ್ಲ ತಂತ್ರಜ್ಞಾನ ವನ್ನು ಅಳವಡಿಸಿ ಪ್ರತಿಷ್ಠಿತ ಅಂತ ಕರೆದುಕೊಳ್ಳುವ ಆಸ್ಪತ್ರೆಯಲ್ಲಿ ಯಾವುದೇ ಎಡವಟ್ಟುಗಳಾಗದೆ ಆರೋಗ್ಯಯುತವಾಗಿ ಗರ್ಭಿಣಿ ಹೆಣ್ಣುಮಗಳ ಹೆರಿಗೆ ಮಾಡಿಸಲು ಯಾಕೆ ಸಾಧ್ಯವಾಗಿಲ್ಲ.? ಬಣ್ಣ ಬಣ್ಣದ ಜಾಹಿರಾತು ನೀಡಿ ಆರೋಗ್ಯದ ಕಾಳಜಿ, ನುರಿತ ವೈದ್ಯರು, ಗುಣಮಟ್ಟದ ಚಿಕಿತ್ಸೆ ಹೆಸರಲ್ಲಿ ಧೈರ್ಯ ತುಂಬಿ ಆಹ್ವಾನಿಸುವ ಆಸ್ಪತ್ರೆಯು ಈ ರೀತಿ ಎಡವಟ್ಟಾದ ಚಿಕಿತ್ಸೆಯಿಂದ ಜೀವವನ್ನೇ ಕಳೆದುಕೊಳ್ಳುವ ಕುಟುಂಬಗಳಿಗೆ ಯಾವ ರೀತಿಯ ಧೈರ್ಯವನ್ನು ತುಂಬುತ್ತದೆ.?.
ಇಂತಹ ಹಲವಾರು ಪ್ರಕರಣ ಮೆಡಿಕಲ್ ಕಾಲೇಜುಗಳಲ್ಲಿ ನಡೆಯುತ್ತಿದೆ. ಬಡವರ ಜೀವಕ್ಕೆ ಬೆಲೆನೇ ಇಲ್ಲದ ಸ್ಥಿತಿನಿರ್ಮಾಣಗೊಂಡಿದೆ. ಎ.ಜೆ ಮೆಡಿಕಲ್ ಆಸ್ಪತ್ರೆಯಲ್ಲಿ ನಡೆದ ಈ ಪ್ರಕರಣವನ್ನು ಜಿಲ್ಲಾಡಳಿತ , ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥ ವೈದ್ಯರ ಮೇಲೆ ಮತ್ತು ಬೇಜವಾಬ್ದಾರಿ ವಹಿಸಿದ ಆಸ್ಪತ್ರೆಯ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದೇವೆ.(ಸಂತೋಷ್ ಬಜಾಲ್ ಜಿಲ್ಲಾ ಕಾರ್ಯದರ್ಶಿ
ಡಿವೈಎಫ್ಐ ದ.ಕ)