ಎಪ್ಪತ್ತರ ದಶಕದಲ್ಲಿ ಬರಡು ನೆಲವೆಂದೇ ಹೆಸರಾದ ಜಗಳೂರಿನಲ್ಲಿ ನಾಲಂದ ಕಾಲೇಜು ಪ್ರಾರಂಭವಾಗಿದ್ದು ಮರಳು ಗಾಡಿನ ನಡುವೆ ಓಯಸೀಸ್ ನಂತೆ ಆಗಿತ್ತು. ಇಲ್ಲದಿದ್ದರೆ ನನ್ನಂತಹ ಹಳ್ಳಿಮುಕ್ಕರಿಗೆ ಕಾಲೇಜು ಓದುವ ಸೌಭಾಗ್ಯವೆಲ್ಲಿ ದೊರಕೀತು. ಬರಡು ನೆಲಕ್ಕೆ ಶಿಕ್ಷಣದ ತಂಪೆರೆಯುವ ಕನಸು ಕಂಡು ನನಸಾಗಿಸಿಕೊಂಡ ತಿಪ್ಪೆಗುಂಡಿ ಮನೆತನದ ತಿಪ್ಪೇಸ್ವಾಮಿಯವರು ಕಾಲೇಜಿಗೆ ಒಳ್ಳೆಯ ಉಪನ್ಯಾಸಕರ ಪಡೆಯನ್ನೇ ಹುಡುಕಿ ತಂದಿದ್ದರು. ಅಂತಹ ಮುತ್ತುರತ್ನಗಳಲ್ಲಿ ನಮಗೆ ಕೊಹಿನೂರಿನ ವಜ್ರದಂತೆ ಕಂಡವರು ಕನ್ನಡದ ಉಪನ್ಯಾಸಕರಾದ ಶ್ರೀ ಎಂ ಬಸವಪ್ಪನವರು.

ಪಕ್ಕಾ ಹಳ್ಳಿ ಶಾಲೆಯಲ್ಲಿ ಓದಿದ ನಾನು ಪಿಯುಸಿಗೆ 1975 ರಲ್ಲಿ ನಾಲಂದ ಕಾಲೇಜಿಗೆ ಸೇರಿದೆ. ಕಾಲೇಜು ಆಗಿನ್ನು ಜೆಎಂ ಇಮಾಮ್ ಸಾಹೇಬರ ಬಂಗಲೆಯಲ್ಲಿ ಇತ್ತು ಅದುವರೆಗೆ ಕನ್ನಡ ಮಾಧ್ಯಮದಲ್ಲಿ ಓದಿ ಒಳ್ಳೆಯ ಅಂಕ ಗಳಿಸುತ್ತಿದ್ದ ನಾನು ಪಿಯುನಲ್ಲಿ ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಹಂಬಲ ಹೊಂದಿದ್ದೆ .ಅದಕ್ಕೆ ಕಾರಣ ಸಮಾಜ ಶಾಸ್ತ್ರದ ಒಲವು ನನಗೆ ಕಾಡುತ್ತಿತ್ತು. ಆದರೆ ಅಕ್ಕಪಕ್ಕದವರ ಬಲವಂತಕ್ಕೆ ವಿಜ್ಞಾನದ ವಿಷಯಗಳಿಗೆ ಸೇರಿಸಲ್ಪಟ್ಟೆ. ಫಲಿತಾಂಶ ಮುಂದೆ ಕಾದಿತ್ತು. ಪ್ರಥಮ ಪಿಯುನಲ್ಲಿ ವಿಜ್ಞಾನದ ವಿಷಯದಲ್ಲಿ ಫೇಲು. ಮುಂದೆ ಏನು ಮಾಡಬೇಕು ಎಂದು ನನಗೆ ತೋಚದಾಯಿತು. ಕೀಳರಿಮೆ ನನ್ನಲ್ಲಿ ಕಾಡಿತು .

ಇದು ನನ್ನೊಬ್ಬನ ಪಾಡಲ್ಲ. ಆಗ ಯಾರದೋ ಮಾತಿಗೆ ವಿಜ್ಞಾನ ಸೇರಿದ ನನ್ನಂತಹ ಹಳ್ಳಿ ಮುಕ್ಕರ ಎಲ್ಲರ ಪಾಡಾಗಿತ್ತು .ಆಗ ನಮ್ಮೆಲ್ಲರಿಗೆ ಸಾಂತ್ವನ ತುಂಬಿದವರೆಂದರೆ ಎಂ ಬಸವಪ್ಪ ನವರು

.ಇಂಗ್ಲೀಷ್ ಆಗ ನಮಗೆ ಕಬ್ಬಿಣದ ಕಡಲೆ .ವ್ಯಾಕರಣವೂ ಸರಿಯಾಗಿ ಬಾರದು.ಇನ್ನು ಪಾಠಗಳನ್ನು ಏನು ತಾನೆ ಕಲಿತೇವು. “ಇಲ್ಲ ಇಲ್ಲ ಎದೆಗುಂದ ಬ್ಯಾಡ್ರಿ ಕಣ್ರಯ್ಯ,ಇಂಗ್ಲಿಷ್ ಬರದಿದ್ದರೆ ಏನಂತೆ ,ಅದನ್ನು ಸ್ವಲ್ಪ ದಿನ ಕನ್ನಡದಲ್ಲಿ ಓದಿಕೊಂಡರೆ ಆಯ್ತಪ್ಪ ಎಂದು ಧೈರ್ಯ ತುಂಬಿದವರುಗುರುಗಳು.

ಒಹೋ,ಇಲ್ಲಿ ನಮ್ಮ ಮನಸ್ಸನ್ನು ಆಲಿಸುವವರು ಒಬ್ಬರಿದ್ದಾರೆ ಎಂಬ ಆಸರೆಯ ಮನೋಭಾವ ಆಗ ನಮಗೆ.
ಕಲ್ಲನ್ನು ಬೇಕಾದರೆ ಕುಟ್ಟಿ ಪುಡಿ ಮಾಡಬಹುದಂತೆ ,ಪಾದರಸದಂತೆ ಹರಿದಾಡಬೇಕು ಕಂಡ್ರೆಯಾ, ಮನಸ್ಸಿಗಿಂತ ಮಿಗಿಲಾದುದು ಯಾವುದು ಇಲ್ಲ, ಭಾಷೆ ಯೊಂದು ಬರುವುದಿಲ್ಲ ಅಂತ ರಣಹೇಡಿ ಗಳಾಗ್ತೀರ ? ಹೇ , ಹೇ ಏಳ ರಯ್ಯಾ ಮೇಲೆ -ಎಂದು ನಮ್ಮನ್ನು ಎತ್ತಿ ನಿಲ್ಲಿಸಿದವರು ಅವರೇ ,ಮತ್ತಾರು ಅಂತೀರಾ ಎಂ ಬಸವಪ್ಪನವರು.
.
ಅವರ ಮಾತುಗಳ ಚಾಟಿಯಿಂದ , ಉತ್ತೇಜನ ,ಮಾರ್ಗದರ್ಶನದಿಂದ ಇಂಗ್ಲಿಷ್ ಎಂಬ ಮಾಯಾಂಗನೆಯನ್ನು ವಶಪಡಿಸಿಕೊಳ್ಳುವುದು ನನಗೆ ನನ್ನಂಥವರಿಗೆ ಹೆಚ್ಚು ಕಾಲ ಬೇಕಾಗಲಿಲ್ಲ .ಎರಡನೆಯ ಪಿಯು ಯಾರೂ ಫೇಲಾಗಬಾರದು ಎಂದು ನಿಶ್ಚಯಿಸಿ ಅದನ್ನು ಸಾಧಿಸಿ ತೋರಿಸಿ ಯಾಯ್ತು.

ಈ ನಡುವೆ ಬಸವಪ್ಪ ಮೇಷ್ಟ್ರ ಕನ್ನಡ ಪಾಠವೆಂದರೆ ನಮಗೆ ಅಚ್ಚು ಬೆಲ್ಲ ಕಡಲೆ ಸವಿದಂತೆ ಆಗಿತ್ತು.ಅವರು ಕ್ಲಾಸಿನಲ್ಲಿ ಬರೀ ಪುಸ್ತಕದ ಬದನೆಕಾಯಿ ಹೇಳಿದವರಲ್ಲ. ಡಾ.ಕೋವೂರ್, ಪೆರಿಯಾರ್, ಚಂಪಾ ,ಡಾ.ಹೆಚ್ ನರಸಿಂಹಯ್ಯ, ಕುವೆಂಪು ,ಅಡಿಗ, ಕಾರಂತ ಹೀಗೆ ಕನ್ನಡ ದಿಗ್ಗಜರ ವೈಚಾರಿಕ ಸಾಹಿತ್ಯವನ್ನು ಅವರು ಶಿಷ್ಯರಿಗೆ ಅರೆದು ಕುಡಿಸಿದರು ಮೇಷ್ಟ್ರಿಗೆ ನಾಟಕದ ಗೀಳು ಜಾಸ್ತಿ. ನಾಲಂದ ಕಲಾಭಾರತಿ ನಾಟಕ ತಂಡವನ್ನು ಕಟ್ಟಿ ಕಾಲೇಜಿನ ಸಹೋದ್ಯೋಗಿ ಗೆಳೆಯರೊಂದಿಗೆ ಹೊಸ ಹೊಸ ನಾಟಕಗಳನ್ನು ಆಡಿ, ಆಡಿಸಿ ರಾಜ್ಯಮಟ್ಟದ ಪ್ರಶಸ್ತಿಗಳನ್ನು ದೋಚಿಕೊಂಡು ಬಂದದ್ದು ಅವರ ಹೆಗ್ಗಳಿಕೆ . ತಂಡದ ಕೊಂಗವಾಡ, ಮರಿಗೌಡರ್,ಪ್ರಭಾಕರ್ ಲಕ್ಕೊಳ್, ತಿಮ್ಮರಾಜು ಮುಂತಾದವರೆಲ್ಲ ದೈತ್ಯ ಪ್ರತಿಭೆಗಳೇ .

ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಥಮ ಜಿಲ್ಲಾ ಅಧ್ಯಕ್ಷರಾಗಿ ಅವರು ಕೈಗೊಂಡ ಅನೇಕ ಚಟುವಟಿಕೆಗಳಿಗೆ ಅವರೇ ಪ್ರಥಮರಾಗಿ ಉಳಿದಿರುವುದು ಒಂದು ವಿಶೇಷ .ಆ ಸಂದರ್ಭದಲ್ಲಿ ಜಗಳೂರು ತಾಲೂಕಿನ ಕ ಸಾ ಪ ಅಧ್ಯಕ್ಷ ನಾಗಿದ್ದ ನನ್ನ ಮೂಲಕ ಗುರುಗಳು ಕಟ್ಟಿದ ಗಟ್ಟಿತನದ ತಂಡ ಇಲ್ಲಿ ಸದೃಢವಾದ ಚಟುವಟಿಕೆಗಳನ್ನು ನಡೆಸಲು ಕಾರಣವಾಯಿತು .ಆಗ ನಡೆದ ಗೃಹ ಗೋಷ್ಠಿಗಳು, ಶಾಲಾ ಅಂಗಳದಲ್ಲಿ ಸಾಹಿತ್ಯೋತ್ಸವ, ಸೊಲಭಕ್ಕನವರ ತಂಡದ ಮೂಲಕ ನಡೆದ ದೊಡ್ಡಾಟಗಳು, ಸಾಹಿತ್ಯ ದಿಗ್ಗಜರೊಂದಿಗೆ ಸಂವಾದ ,ಕಾವ್ಯ, ಕಥೆ ಕಮ್ಮಟಗಳು ,ವಿಭಾಗ ಮಟ್ಟದ ಜಾನಪದ ಮೇಳ ಮುಂತಾದವನ್ನು ಜನ ಈಗಲೂ ಮೆಲುಕು ಹಾಕುತ್ತಾರೆ. ಇದಕ್ಕೆಲ್ಲ ಮೂಲ ಸೂತ್ರದಾರರು ಬಸವಪ್ಪನವರೇ. ಶಿಷ್ಯರನ್ನು ಮುಂದಿಟ್ಟುಕೊಂಡು ಅವರು ಪರದೆಯ ಹಿಂದೇ ಇರುತ್ತಿದ್ದರು. ಎಂದೂ ಯಾವ ವೇದಿಕೆಯಲ್ಲೂ ಬಂದು ಕಾಣಿಸಿಕೊಳ್ಳುತ್ತಿರಲಿಲ್ಲ. ಪ್ರಚಾರದಿಂದ ,ಸನ್ಮಾನಗಳಿಂದ ಅವರು ಗಾವುದ ದೂರ ಉಳಿಯುತ್ತಿದ್ದರು.

ಬಸವಪ್ಪ ಗುರುಗಳು ಹುಟ್ಟಿ ಬೆಳೆದದ್ದು ಶಿವಮೊಗ್ಗ ಜಿಲ್ಲೆಯಲ್ಲಿ. ಅವರ ಹುಟ್ಟೂರು ಈಗಿನ ನ್ಯಾಮತಿ ತಾಲೂಕಿನ ಗೋವಿನಕೋವಿ.ಶರಣರಾದ ಭರಮಪ್ಪ ,ಈರಮ್ಮದಂಪತಿಗಳ ಪುತ್ರರಾಗಿ 1948 ರ ಜುಲೈ 13 ರಂದು ಜನಿಸಿದ ಬಸವಪ್ಪನವರು ಎಂಟನೇ ತರಗತಿಯವರೆಗೆ ಹುಟ್ಟೂರಿನಲ್ಲಿಯೇ ವಿದ್ಯಾಭ್ಯಾಸ ಮಾಡಿದರು .ನಂತರ ಚೀಲೂರು,ಶಿವಮೊಗ್ಗ ಸಹ್ಯಾದ್ರಿ ಕಾಲೇಜುಗಳಲ್ಲಿ ಪದವಿ ಮುಗಿಸಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಸ್ನಾತಕೋತ್ತರ ಪದವಿಗೆ ಸೇರಿದರು .ಅಲ್ಲಿ ಗಿರಡ್ಡಿ ಗೋವಿಂದರಾಜು, ಸಿದ್ದಲಿಂಗ ಪಟ್ಟಣಶೆಟ್ಟಿ, ಚಂಪಾ, ಎಂ ಎಂ ಕಲಬುರ್ಗಿ ,ವೀರಣ್ಣ ದಂಡೆ ,ಪಾಟೀಲ ಪುಟ್ಟಪ್ಪ ,ವಿ ಕೃ ಗೋಕಾಕರ ಗೆಳೆತನ ದೊರಕಿತು.

ಸ್ನಾತಕೋತ್ತರ ಪದವಿ ಮುಗಿಯುತ್ತಿದ್ದಂತೆ ನಾಲಂದ ಕಾಲೇಜಿನ ಉಪನ್ಯಾಸಕರಾಗಿ 1973ರಲ್ಲಿ ಬಸವಪ್ಪನವರು ಜಗಳೂರಿಗೆ ಬಂದರು. ಅಲ್ಲಿಂದ ಸುಧೀರ್ಘ 33 ವರ್ಷಗಳ ಕಾಲ ಜಗಳೂರಿನೊಂದಿಗೆ ಅವರ ಎಡೆಬಿಡದ ನಂಟು . ಈ ನಡುವೆ ಪ್ರಜಾವಾಣಿ ಪತ್ರಿಕೆಯ ವರದಿಗಾರರಾಗಿ ದಶಕಗಳ ಕಾಲ ಜಗಳೂರಿನಲ್ಲಿ ಸೇವೆ . 1996ರಲ್ಲಿ ಜಗಳೂರಿನಲ್ಲಿ ನಡೆದ ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಮುಖ ರೂವಾರಿ.(ಆಗಿನ್ನು ಜಗಳೂರು ತಾಲೂಕು ಚಿತ್ರದುರ್ಗ ಜಿಲ್ಲೆಗೆ ಸೇರಿತ್ತು )ನನ್ನಂತಹ ಶಿಷ್ಯರನ್ನು ಸಮ್ಮೇಳನಕ್ಕಾಗಿ ಹುರಿದುಂಬಿಸಿ ಕೆಲಸ ಕಾರ್ಯದಲ್ಲಿ ತೊಡಗಿಸಿದರು. ಗೋಕಾಕ ಚಳುವಳಿಗೂ ಟೊಂಕ ಕಟ್ಟಿ ನಿಂತರು..

ಅವರು ನಿವೃತ್ತಿಯ ನಂತರ ಶಿವಮೊಗ್ಗ ಸೇರಿಕೊಂಡರು. ಗೋವಿನ ಕೋವಿಯಲ್ಲಿ ಪಿತ್ರಾರ್ಜಿತವಾಗಿ ಬಂದಿದ್ದ ಹೊಲವನ್ನು ಹಸಲು ಗೊಳಿಸಿ ಅಡಿಕೆ ತೋಟ ಮಾಡಿದರು. ಎರಡು ಜನ ಮಕ್ಕಳಿಗೆ ಮದುವೆ ಮಾಡಿ ಅಜ್ಜನೆನಿಸಿಕೊಂಡರು.

ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಜಿಲ್ಲೆಗಳಲ್ಲಿ ಬಸವಪ್ಪನವರಿಗೆ ಸಾವಿರ ಸಾವಿರ ಸಂಖ್ಯೆಯ ಶಿಷ್ಯರು. ಅವ ರೊಂದಿಗೆ ನಿಕಟ ಸಂಪರ್ಕ ಸಾಧಿಸಿದ ಅದ್ವಿತೀಯರು ಬಸವಪ್ಪ ನವರು.ಅವರ ಬೆಂಬಿಡದ ಒತ್ತಾಯದ ಕಾರಣದಿಂದಲೇ ನಾನು ಈಗ ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ ಗಳನ್ನು ಕುರಿತು
ಪುಸ್ತಕ ಬರೆದು ಮುಗಿಸಿದ್ದೇನೆ. ಇಂತಹುದೇ ಬೆಂಬಲ ನನ್ನ ಮುವ್ವತ್ತಾರು ಕೃತಿ ಗಳ ಸಂದರ್ಭದಲ್ಲಿಯೂ ಇವರಿಂದ ದೊರಕಿದೆ. ಶಿಷ್ಯರ ಬೆನ್ನುತಟ್ಟಿ ಯಾರ್ಯಾರು ಏನು ಕೆಲಸ ಮಾಡಬಲ್ಲರು ಎಂದು ತಿಳಿದು ಅವರಿಂದ ಆಯಾ ಕೆಲಸಗಳನ್ನು ಮಾಡಿಸುವಲ್ಲಿ ಬಸವಪ್ಪ ನವರು ಸಿದ್ಧಹಸ್ತರು.

ಗುರುಗಳಿಗೆ ಇದೇ ಜುಲೈ 13ಕ್ಕೆ 75 ವರ್ಷ ತುಂಬಿದವು. ಎಪ್ಪತೈದರ ವಯಸ್ಸಿನಲ್ಲಿಯೂ ಇಪ್ಪತ್ತೈದರ ಹುರುಪು ಹುಮ್ಮಸ್ಸು ಅವರಲ್ಲಿ ಮನೆಮಾಡಿದೆ. ಪಾದರಸದಂತೆ ನಾಡೆಲ್ಲ ಸಂಚಾರ ಮಾಡುವ ಉಮೇದಿ ಅವರಲ್ಲಿ ಈಗಲೂ ಇದೆ. ಈ ಲೇಖನ ಬರೆಯುವ ಸಮಯದಲ್ಲಿ ಅವರು ಜಮ್ಮು ಕಾಶ್ಮೀರದ ಪ್ರವಾಸದಲ್ಲಿದ್ದಾರೆ .ಶಿಷ್ಯರ ಎದೆಯಲ್ಲಿ ಶಾಶ್ವತವಾಗಿ ಉಳಿದಿರುವ ಬಸವಪ್ಪ ಗುರುಗಳು ನೂರು ಕಾಲ ಬಾಳಲಿ ನಮ್ಮ ಬದುಕು ಬಂಗಾರವಾಗಲು ಅವರ ಮಾರ್ಗದರ್ಶನ ಸದಾ ಸಿಗುತ್ತಿರಲಿ ಅವರಿಗೆ ದೇವರು ಆಯುಷ್ಯ, ಆರೋಗ್ಯ, ಸಂಪತ್ತು ಸಮೃದ್ಧಿಯಾಗಿ ನೀಡಲಿ ಎಂದು ಶಿಷ್ಯರೆಲ್ಲರ ಪರವಾಗಿ ದೇವರಲ್ಲಿ
ಪ್ರಾರ್ಥಿಸುವೆ.(ಎನ್ .ಟಿ . ಎರ್ರಿ ಸ್ವಾಮಿ
ನಿವೃತ್ತ ಕೆನರಾ ಬ್ಯಾಂಕ್ ಡಿ ಎಂ)

LEAVE A REPLY

Please enter your comment!
Please enter your name here