ದಾವಣಗೆರೆ ಜು. ೮:ಜಾಗತೀಕರಣವು ನೆಲಮೂಲ ಸಂಸ್ಕೃತಿಯನ್ನು ಹೊಸಕಿ ಹಾಕಿರುವ ಈ ಸಂದರ್ಭದಲ್ಲಿ ಬರಹಗಾರನಿಗೆ ಅನೇಕ ಸವಾಲುಗಳಿವೆ. ಧರ್ಮ ಮತ್ತು ರಾಜಕೀಯದ ಅಪವಿತ್ರ ಮೈತ್ರಿಯಿಂದ ಸಮಾಜದಲ್ಲಿ ಸಂಘರ್ಷಗಳು ಕೊಳ್ಳಿದೆವ್ವಗಳಂತೆ ಗೋಚರಿಸುತ್ತಿವೆ. ಇಂತಹ ಹೊತ್ತಿನಲ್ಲಿ  ಬರಹಗಾರ ಕೋಳಿಗಳಂತೆ ಜಗತ್ತನ್ನು ಎಚ್ಚರಿಸುವ ಕೆಲಸ ಮಾಡಬೇಕಾಗಿದೆ ಎಂದು ಜಾನಪದ ವಿದ್ವಾಂಸ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ ಕರೆ ನೀಡಿದರು.
ವೀರಲೋಕ ಬಕ್ಸ್ ಬೆಂಗಳೂರು ಮತ್ತು ಸಿದ್ಧಗಂಗಾ ಶಾಲಾ ಸಹಯೋಗದಲ್ಲಿ ಎರಡು ದಿನಗಳ ದೇಸಿ ಜಗಲಿ ಕಥಾ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದರು.

ಬರಹಗಾರನಿಗೆ ಪದವಿ, ವೃತ್ತಿ ಮುಖ್ಯವಾಗುವುದಿಲ್ಲ. ಗ್ರಹಿಕೆ, ಪೂರ್ವಸೂರಿಗಳ ಅಧ್ಯಯನ, ಅನುಭವದ ಕಾವುಗಳಿದ್ದಾಗ ಉತ್ತಮ ಕಥೆಗಾರನಾಗಲು ಸಾಧ್ಯ. ಕುವೆಂಪು ಅವರಿಗೆ ಕಾಡು, ಕಾರಂತರಿಗೆ ಕಡಲು, ಮಾಸ್ತಿಯವರಿಗೆ ಲೋಕಾನುಭವ, ದೇವನೂರರಿಗೆ ದಲಿತ ಲೋಕ, ಬೆಸಗರಹಳ್ಳಿಯವರಿಗೆ ಗ್ರಾಮೀಣ ಜೀವನದ ದಟ್ಟ ಅನುಭವಗಳು ಕನ್ನಡದ ಶ್ರೇಷ್ಠ ಕಥೆಗಾರನ್ನಾಗಿಸುವೆ. ಬರಹಗಾರರಿಗೆ ಹೊರಗಣ್ಣಿನಿಂದ ನೀಡಿದ್ದನ್ನು ಒಳಗಣ್ಣಿನ ಮೂಲಕ ಗ್ರಹಿಸಿ, ತನ್ನ ಸೃಜನಶಕ್ತಿ ಮತ್ತು
ಅನುಭವದ ಮೂಸೆಯಿಂದ ಕಥೆಗಳನ್ನು ರಚಿಸಬಹುದು. ಸಹಬಾಳ್ವೆ, ಬಹುತ್ವ, ಸಮಾಜಮುಖಿ ನಿಲುವುಗಳು ಕಥೆಗಾರನ ಜರೂರು ಅಗತ್ಯಗಳಾಗಿವೆ ಎಂದು
 ಕಲಮರಹಳ್ಳಿ ತಿಳಿಸಿದರು. ಮುಖ್ಯ ಅತಿಥಿಗಳಾಗಿದ್ದ ಸಿದ್ಧಗಂಗಾ ವಿದ್ಯಾಸಂಸ್ಥೆಯ ಪ್ರಾಚಾರ್ಯರಾದ ಜಸ್ಟಿನ್ ಡಿಸೋಜ ಮಾತನಾಡಿ, ಕನ್ನಡ ಸಾಹಿತ್ಯದಲ್ಲಿ ಕಥಾ ಸಾಹಿತ್ಯಕ್ಕೆ ದೊಡ್ಡ ಪರಂಪರೆ ಇದೆ. ಪರಂಪರೆಯ ಅರಿವು, ಅಧ್ಯಯನ, ಕಲ್ಪನಾಶಕ್ತಿಯ ಮೂಲಕ ಉತ್ತಮ ಕಥೆಗಾರರಾಗಲು ಈ ಕಮ್ಮಟ ಮಾರ್ಗದರ್ಶಿಯಾಗಲಿ ಎಂದು ಆಶಿಸಿದರು.
ಯುವ ಕಥೆಗಾರ ಮೋದೂರು ತೇಜು,
ಶಿಬಿರದ ನಿರ್ದೇಶಕರಾದ ಎಚ್ ಬಿ ಇಂದ್ರಕುಮಾರ್, ಸಂತೆಬೆನ್ನೂರು ಪೈಜ್ ನಟರಾಜ, ಸಂಚಾಲಕರಾದ ಪಾಪುಗುರು,  ನಾಗರಾಜ ಸಿರಿಗೆರೆ ಪಾಲ್ಗೊಂಡಿದ್ದರು.
ಎರಡು ದಿನಗಳ   ಶಿಬಿರದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ೨೫ ಜನ ಯುವ ಬರಹಗಾರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here