ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಅವರ ಹೆಸರಿನಲ್ಲಿ ಬಿ.ಎಲ್.ಡಿ.ಇ. ಸಂಸ್ಥೆಯು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿದ್ದು ಅದರ ಮುಖಾಂತರ ಡಾ. ಫ.ಗು.ಹಳಕಟ್ಟಿ ಅವರ ಸಮಗ್ರ ಸಾಹಿತ್ಯ ಸಂಪುಟಗಳನ್ನು ಪ್ರಕಟಿಸಿದುದು ಮಾತ್ರವಲ್ಲ, ಅವರು ಬಳಸುತ್ತಿದ್ದ ವಸ್ತುಗಳ ಸಂಗ್ರಹಿಸಿ ಪ್ರದರ್ಶನಕ್ಕೆ ಇರಿಸಿದೆ.
ಅಂಥ ಸಂಗ್ರಹಗಳಲ್ಲಿ ಡಾ. ಹಳಕಟ್ಟಿ ಅವರ “ಹಿತಚಿಂತಕ ಮುದ್ರಣಾಲಯ”ದ ಮುದ್ರಣ ಯಂತ್ರವನ್ನು ಕೂಡ ಜೋಪಾನವಾಗಿ ಇರಿಸಲಾಗಿದೆ. ಈ ಮುದ್ರಣ ಯಂತ್ರದೊಂದಿಗೆ ನನ್ನ ಭಾವನಾತ್ಮಕ ಸಂಬಂಧವಿದೆ.
1980ರ ದಶಕದಲ್ಲಿ ವಿಜಯಪುರ ನಗರದ ಉಪ್ಪಲಿ ಬುರುಜ ಎದುರಿಗೆ ನಮ್ಮ “ಡಾ. ಅಂಬೇಡ್ಕರ್ ಪ್ರಿಂಟಿಂಗ್ ಪ್ರೆಸ್” ಇತ್ತು. ಹಾಗೆಯೇ ನಮ್ಮ ಪ್ರಿಂಟಿಂಗ್ ಪ್ರೆಸ್ ಹಿಂಭಾಗದಲ್ಲಿದ್ದ ದಖನಿ ಈದ್ಗಾ ಎದುರಿಗೆ ಡಾ. ಫ.ಗು. ಹಳಕಟ್ಟಿಯವರ “ಹಿತಚಿಂತಕ ಮುದ್ರಣಾಲಯ” ಇತ್ತು. ಅದನ್ನು ಡಾ. ಹಳಕಟ್ಟಿಯವರ ನಿಧನಾನಂತರ ಪುತ್ರರಾದ ಗುರುಬಸಪ್ಪ (ಗುರುರಾಜ) ಅವರು ಈ ಮುದ್ರಣಾಲಯವನ್ನು ನಡೆಸಿಕೊಂಡು ಹೋಗುತ್ತಿದ್ದರು. ಅವರು ಆಗಾಗ ನಮ್ಮ ಪ್ರೆಸ್ಸಿಗೆ ಬರುತ್ತಿದ್ದರು ಮತ್ತು ನಾನು ಕೂಡ ಅವರ ಬಳಿಗೆ ಹೋಗುತ್ತಿದ್ದೆ.
ಕೆಲವು ಸಲ ಪ್ರಿಂಟರ್ (ಮುದ್ರಣ ಯಂತ್ರದ ಆಪರೇಟರ್) ಕೈಕೊಟ್ಟಾಗ ಗುರುಬಸಪ್ಪನವರು ನನ್ನನ್ನು ಕರೆದು ತಮ್ಮ ಮುದ್ರಣ ಕೆಲಸವನ್ನು ಮಾಡಿಕೊಡಲು ಹೇಳುತ್ತಿದ್ದರು. ಅವರು ನನಗಿಂತ ಹಿರಿಯರಾಗಿದ್ದುದರಿಂದ ಅವರೊಂದಿಗೆ ನಾನು ತುಂಬಾ ಗೌರವದಿಂದ ನಡೆದುಕೊಳ್ಳುತ್ತಿದ್ದೆ. ಹೀಗಾಗಿ ನಾನು ಅವರ ಕರೆದ ತಕ್ಷಣ ಹೋಗಿ ತುರ್ತಾಗಿ ಮಾಡಬೇಕಾಗಿದ್ದ ಮುದ್ರಣ ಕೆಲಸವನ್ನು ಮಾಡಿಕೊಡುತ್ತಿದ್ದೆ. ಜೊತೆಗೆ ಅದು ಡಾ. ಫ.ಗು. ಹಳಕಟ್ಟಿಯವರು ಬಹಳ ಕಷ್ಟಪಟ್ಟು, ಒಂದು ಉದಾತ್ತ ಉದ್ದೇಶಕ್ಕಾಗಿ ಮುದ್ರಣಾಲಯವನ್ನು ಪ್ರಾರಂಭಿಸಿದ್ದರೆಂಬುದನ್ನು ಕೇಳಿ ತಿಳಿದಿದ್ದ ಕಾರಣ ನಾನು ಅಭಿಮಾನದಿಂದ ಅವರ ಮುದ್ರಣಾಲಯದ ಕೆಲಸ ನಿಲ್ಲದಂತೆ ನೋಡಿಕೊಳ್ಳುತ್ತಿದ್ದೆ.
ಬಿ.ಎಲ್.ಡಿ.ಇ. ಸಂಸ್ಥೆಯ ಡಾ. ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದಲ್ಲಿ ಪ್ರದರ್ಶನಕ್ಕೆ ಇರಿಸಿರುವ ಮುದ್ರಣಯಂತ್ರವನ್ನು ನೋಡಿದ ಪ್ರತಿ ಸಾರಿಯೂ ನಾನು ಈ ಮುದ್ರಣ ಯಂತ್ರವನ್ನು ನಡೆಸಿದ್ದೆ ಎಂಬುದು ನನ್ನ ಪಾಲಿಗೆ ಹೆಮ್ಮೆಯ ವಿಷಯ.
ನಿನ್ನೆ (ಜುಲೈ 2) ಸಂಜೆ ಬೆಂಗಳೂರಿನ ಟೌನ್ ಹಾಲ್ ನಲ್ಲಿ ಡಾ. ಫ.ಗು. ಹಳಕಟ್ಟಿ ಫೌಂಡೇಷನ್ ವತಿಯಿಂದ ಅವರ ಜನ್ಮದಿನದ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನಿರೀಕ್ಷಿತವಾಗಿ ಭಾಗವಹಿಸಿದ್ದೆ. ಮತ್ತೊಮ್ಮೆ “ಹಿತಚಿಂತಕ ಮುದ್ರಣಾಲಯ” ನನ್ನ ಸ್ಮೃತಿಪಟಲದ ಮುಂದೆ ಹಾಯ್ದುಹೋಯಿತು.