ಬೆಂಗಳೂರು, ಜುಲೈ ೨; ಇಲ್ಲಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಣೇಹಳ್ಳಿಯ ಶ್ರೀ ಶಿವಕುಮಾರ ಕಲಾಸಂಘ ಬಸವಣ್ಣನವರ ೪೪ ವಚನಗಳನ್ನು ಆಧರಿಸಿದ ಹಿಂದಿ/ಕನ್ನಡ ನೃತ್ಯರೂಪಕ `ತುಮಾರೆ ಸಿವಾ ಔರ್ ಕೋಯಿ ನಹೀ ಹೈ’ (ನೀನಲ್ಲದೆ ಮತ್ತಾರೂ ಇಲ್ಲವಯ್ಯಾ) ದೇಶದ ಪ್ರಥಮ ವಚನ ಸಂಸ್ಕೃತಿ ಅಭಿಯಾನದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಶರಣ ಧರ್ಮ ವಿಶ್ವಕ್ಕೇ ಧರ್ಮವಾಗಬೇಕಿತ್ತು. ಆದರೆ ತತ್ವ ಸಿದ್ಧಾಂತಗಳನ್ನೊಳಗೊAಡ ವಚನಗಳನ್ನು ಬೇರೆ ಭಾಷೆಗೆ ತಲುಪಿಸುವ ಕೆಲಸವನ್ನು ಅಷ್ಟು ಸಮರ್ಥವಾಗಿ ಕನ್ನಡಿಗರು ಮಾಡಿಲ್ಲವೆಂದೇ ಹೇಳಬೇಕು. ಈ ಹಿನ್ನೆಲೆಯಲ್ಲಿ ನಮ್ಮ ಗುರುಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಕಲಾತಂಡ ಕಟ್ಟಿ, ತಾವೇ ನಾಟಕ ರಚಿಸಿ, ನಿರ್ದೇಶಿಸಿ ಪ್ರದರ್ಶಿಸುವ ವ್ಯವಸ್ಥೆ ಮಾಡುತ್ತಿದ್ದರು. ಅದನ್ನು ನಾವೀಗ ಇನ್ನಷ್ಟು ವಿಸ್ತಾರಗೊಳಿಸಿದ್ದೇವಷ್ಟೇ. ಜನ ವಿದ್ಯಾವಂತರಾದಂತೆ ಮೌಢ್ಯಗಳೂ ಹೆಚ್ಚುತ್ತಿವೆ. ಇದು ಸಾಮಾನ್ಯರಿಂದ ಹಿಡಿದು ಮಂತ್ರಿ ಮಹೋದಯರವರೆಗೂ ಹಬ್ಬಿದೆ. ಇದಕ್ಕೆ ತಾಜಾ ಉದಾಹರಣೆ ವಿಧಾನಸೌಧದಲ್ಲಿರುವ ಒಂದು ಕೊಠಡಿಯ ಬಾಗಿಲನ್ನು ವಾಸ್ತು ದೋಷದ ನೆಪವೊಡ್ಡಿ ಹಲವು ವರ್ಷಗಳಿಂದ ಮುಚ್ಚಿರುವುದು. ಆದರೆ ಬಸವ ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಆ ಬಾಗಿಲನ್ನು ತೆಗೆಸಿ ಅದರಿಂದಲೇ ಪ್ರವೇಶ ಮಾಡಿದ್ದು ನಮಗೆ ಅತ್ಯಂತ ಸಂತೋಷ ತಂದುಕೊಟ್ಟಿದೆ. ಇಂಥ ಗಟ್ಟಿಜೀವಗಳು, ಬದ್ದತೆಯ ವ್ಯಕ್ತಿಗಳು ಅಧಿಕಾರದಲ್ಲಿರುವುದು ಬಸವ ತತ್ವ ಅನುಷ್ಠಾನಗೊಳಿಸಲು ಇನ್ನಷ್ಟು ಶಕ್ತಿತಂದುಕೊಟ್ಟAತಾಗಿದೆ. ಬಸವಣ್ಣನವರ ಸಮಸಮಾಜದ ಕಲ್ಪನೆ ಜಾರಿಯಲ್ಲಿ ಬರಲು ಇಂಥ ಸಣ್ಣ ಸಣ್ಣ ಸಂಗತಿಗಳೂ ಬಹಳ ಮಹತ್ವವನ್ನು ಪಡೆಯುತ್ತವೆ. ಈ ಯೋಜನೆಗೆ ಸುಮಾರು ೬೦ ಲಕ್ಷ ಬೇಕಾಗುತ್ತದೆ. ಸರಕಾರಗಳು ಕೊಡಲಿ ಬಿಡಲಿ ನಾವು ಹಣ ಹೊಂದಿಸಿಕೊಡುತ್ತೇವೆ ಎಂದು ರಂಗ ಸಂಘಟಕ ಶ್ರೀನಿವಾಸ ಜಿ ಕಪ್ಪಣ್ಣನವರಿಗೆ ಹೇಳಿದ್ದೆವು. ಅದರಂತೆ ಅವರು ಮುಂದುವರೆದು ನೃತ್ಯರೂಪಕವನ್ನು ಸಜ್ಜುಗೊಳಿಸಿದ್ದಾರೆ. ಇದು ಬಹಳ ತ್ರಾಸದಾಯಕ ಕೆಲಸ. ಆದರೂ ನಮ್ಮ ಪ್ರಯತ್ನ ನಾವು ಮಾಡುತ್ತಲೇ ಇದ್ದೇವೆ. ಈ ಪ್ರಯತ್ನದಲ್ಲಿ ನಮ್ಮೊಡನೆ ತನು-ಮನ-ಧನದೊಂದಿಗೆ ಸಹಕರಿಸುತ್ತಿರುವ ಎಲ್ಲರಿಗೂ ಕೃತಜ್ಞತೆಗಳು ಎಂದರು.

ದೇಶದ ಪ್ರಥಮ ವಚನ ಸಂಸ್ಕೃತಿ ಅಭಿಯಾನದ ಉದ್ಘಾಟನೆ ನೆರವೇರಿಸಿ, ವಚನ ನೃತ್ಯರೂಪಕಕ್ಕೆ ಸಂಬAಧಿಸಿದ ಹಿಂದಿಭಾಷೆಯ ಕೈಪಿಡಿಯನ್ನು ಬಿಡುಗಡೆಗೊಳಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾತನಾಡಿ ಮಾತನಾಡಿ ಸಾಣೇಹಳ್ಳಿ ಸ್ವಾಮೀಜಿಯವರು ಸದಾ ಹೊಸ-ಹೊಸ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಈಗ ಬಸವಣ್ಣನವರ ವಚನಗಳನ್ನು ನೃತ್ಯರೂಪಕದ ಮೂಲಕ ಜನರಿಗೆ ತಲುಪಿಸುವ ಪ್ರಯತ್ನ ಮಾಡಿದ್ದಾರೆ. ಇದು ಅತ್ಯಂತ ಒಳ್ಳೆಯ, ಶ್ಲಾಘನೀಯ ಪ್ರಯತ್ನ. ಈ ಪ್ರಯತ್ನಕ್ಕೆ ಸರಕಾರದ ಪರವಾಗಿ ನಮನಗಳು. ಶಾಮನೂರು ಶಿವಶಂಕರಪ್ಪನವರು ಈಗ ಬಂದಿದ್ದಾರೆ. ಅವರಿಗೆ ಈ ಕಾರ್ಯಕ್ರಮದ ಬಗ್ಗೆ ತಿಳಿದಿಲ್ಲ. ಅದಕ್ಕೆ ನಾನೇ ಕಾರ್ಯಕ್ರಮದ ವಿವವರವನ್ನು ವಿವರಿಸುವೆ. ಈ ನೃತ್ಯರೂಪಕದಲ್ಲಿ ೨೪ ಜನ ಹೆಣ್ಣುಮಕ್ಕಳು ವಚನ ನೃತ್ಯ ಮಾಡುವರು. ನೃತ್ಯದ ಮೂಲಕ ಕನ್ನಡದ ವಚನಗಳನ್ನು ಹಿಂದಿಗೆ ತರ್ಜುಮೆ ಮಾಡಿದ್ದಾರೆ. ಹಿಂದಿಯ ಮೂಲಕ ಬೇರೆ ರಾಜ್ಯದವರಿಗೆ ತಲುಪಿಸುವ ಪ್ರಯತ್ನ ಮಾಡಿದ್ದಾರೆ. ನಮ್ಮಲ್ಲೂ ಬಹಳ ಸುಧಾರಣೆಯಾಗಬೇಕು. ಬಸವಣ್ಣನವರ ಚಿಂತನೆಗಳು ನಮ್ಮಲ್ಲಿಯೂ ಜಾರಿಗೆ ಬರಬೇಕು. ಕಳಬೇಡ, ಕೊಲ ಬೇಡ, ಮುನಿಯಬೇಡ ಎನ್ನುವ ವಚವನ್ನು ಎಲ್ಲರೂ ಹೇಳುತ್ತೇವೆ. ಆದರೆ ನಡೆದುಕೊಳ್ಳುತ್ತೇವೆಯೇ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕು. ಇವ ನಮ್ಮವ, ಇವ ನಮ್ಮವ ಎನ್ನಬೇಕು ಎನ್ನುತ್ತಲೇ ಇವ ಯಾವ ಜಾತಿಯವ, ಇವ ಯಾವ ಜಾತಿಯವ ಎನ್ನುವುದನ್ನು ಕೇಳುತ್ತಿರುವುದು ವಿಷಾದನೀಯ. ಮನುಷ್ಯ ಮನುಷ್ಯರ ನಡುವೆ ಭೇದ ಹೋಗದ ಹೊರತು ಸಮಾನತೆ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಬಸವಣ್ಣನವರ ಪ್ರಯತ್ನ ಸಾರ್ವಕಾಲಿಕವಾದುದು. ಜಾತಿ, ಲಿಂಗ, ವರ್ಗ, ವರ್ಣವ್ಯವಸ್ಥೆ ಹೋಗಿ ಪರಸ್ಪರ ಪ್ರೀತಿ ವಿಶ್ವಾಸದಿಂದ ಬಾಳಬೇಕು. ನಮ್ಮ ದೇಶದಲ್ಲಿ ಜಾತಿಯ ವ್ಯವಸ್ಥೆ ಬಹಳ ಆಳವಾಗಿ ಬೇರೂರಿದೆ. ಇಂಥ ಜಾತಿ ವ್ಯವಸ್ಥೆಗೆ ಚಲನೆಯಿಲ್ಲ. ಚಲನೆಯಿಲ್ಲದ ಸಮಾಜಕ್ಕೆ ವೇಗ ಸಿಗುವುದಿಲ್ಲ. ಇದನ್ನು ಆತ್ಮಾವಲೋಕನ ಮಾಡಿಕೊಂಡಾಗ ವಿದ್ಯಾವಂತರೆ ಹೆಚ್ಚು ಜಾತಿ ಮಾಡುತ್ತಿದ್ದಾರೆ. ಹಿಂದೆ ಊರಿನ ಯಜಮಾನರೇ ಸೇರಿ ಇಂಥವರಿಗೆ ಓಟು ಬೇಕು ಎಂದು ಹೇಳುತ್ತಿದ್ದರೆ ಎಲ್ಲರೂ ಅವರ ಮಾತನ್ನು ಕೇಳುತ್ತಿದ್ದರು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಜಾತಿಗೊಬ್ಬ ಲೀಡರ್ ಹುಟ್ಟಿಕೊಂಡಿದ್ದಾರೆ. ವಿದ್ಯೆ ಕಲಿತಿದ್ದಾರೆ ಜಾತಿ ಹೋಗಿಲ್ಲ. ಜ್ಞಾನ ಸಂಕುಚಿತಗೊಳ್ಳದೆ ವಿಕಾಸನಗೊಳ್ಳಬೇಕು. ಇದನ್ನೇ ಕುವೆಂಪು ಹುಟ್ಟುವಾಗ ವಿಶ್ವಮಾನವರು, ಬೆಳೆಯುತ್ತ ಅಲ್ಪಮಾನವಾಗುತ್ತಿದ್ದಾರೆ ಎಂದು ಎಚ್ಚರಿಸಿದ್ದಾರೆ. ಜನ ಜಾತಿ ಸಂಕೋಲೆಯಿAದ, ಮೌಢ್ಯದಿಂದ ಹೊರಬರಬೇಕು. ಚಾಮರಾಜನಗರಕ್ಕೆ ಮುಖ್ಯಮಂತ್ರಿಗಳಾದವರು ಹೋಗುತ್ತಿರಲಿಲ್ಲ. ಹೋದರೆ ಮುಖ್ಯಮಂತ್ರಿ ಸ್ಥಾನ ಹೋಗುತ್ತದೆ ಎನ್ನುವ ಮೌಢ್ಯತೆ ಇತ್ತು. ಆದರೆ ನಾನು ೧೨ ಸಾರಿ ಅಲ್ಲಿಗೆ ಹೋಗಿದ್ದೇನೆ. ಎರಡು ಸಾರಿ ಮುಖ್ಯಮಂತ್ರಿಯಾಗಿದ್ದೇನೆ. ಮುಖ್ಯಮಂತ್ರಿ ಸ್ಥಾನ ಹೋಗಲು-ಬರಲು ಮೌಢ್ಯಗಳೇ ಕಾರಣವಲ್ಲ. ಸದಾಶಿವನಗರದಲ್ಲಿ ಸರಕಾರದ ಬಂಗಲೆಯಲ್ಲಿ ಯಾರೋ ಸತ್ತಿದ್ದಾರೆ ಎನ್ನುವ ಕಾರಣಕ್ಕೆ ಅಲ್ಲಿಗೆ ಹೋಗಲು ಯಾವ ಅಧಿಕಾರಿಗಳು ಮುಂದೆ ಬರುತ್ತಿಲ್ಲ. ಶಿಕ್ಷಿತರಾದರೆ ಜಾತಿಯ ಬೇರುಗಳು ಸಡಿಲವಾಗಬಹುದು ಎನ್ನುವ ಭಾವನೆಯಿತ್ತು. ಆದರೆ ಹಾಗೆ ಆಗಿಲ್ಲ. ಬಸವಣ್ಣ ಮೊದಲಾದ ಶರಣರು ಹೇಳಿದ ಮಾತುಗಳು ಎಲ್ಲ ಕಾಲಕ್ಕೂ ಪ್ರಸ್ತುತವಾದ ಮಾತುಗಳು. ಈ ಹಿನ್ನೆಲೆಯಲ್ಲಿ ಪೂಜ್ಯ ಶ್ರೀಗಳ ಮಾರ್ಗದರ್ಶನದಲ್ಲಿ ಈ ತಂಡ ೧೪ ರಾಜ್ಯಗಳಲ್ಲಿ ಸಂಚರಿಸಿ ಸುಮಾರು ೬೦ ಪ್ರದರ್ಶನಗಳನ್ನು ನೀಡುವ ಮೂಲಕ ಬಸವಣ್ಣನವರ ತತ್ವ ಸಿದ್ದಾಂತಗಳನ್ನು ದೇಶದಲ್ಲಿ ಹರಡುವ ಪ್ರಯತ್ನ ಮಾಡುತ್ತಿದೆ. ಬಸವಣ್ಣಣವರು ಕಂಡ ಕನಸು ನನಸಾಗಬೇಕಾಗಿದೆ. ಬಸವಣ್ಣನವರು ಅನುಷ್ಠಾನಗೊಳಿಸಿದ ಎರಡು ಪ್ರಮುಖ ತತ್ವಗಳು ಕಾಯಕ ಮತ್ತು ದಾಸೋಹ. ಕಾಯಕ ಎಂದರೆ ಉತ್ಪಾದನೆ. ದಾಸೋಹ ಎಂದರೆ ಡಿಸ್ಟುö್ಯಬ್ಯುಷನ್. ದೇಶದ ಸಂಪತ್ತನ್ನು ಎಲ್ಲರೂ ಸೇರಿ ಉತ್ಪಾದನೆ ಮಾಡಿದ್ದೇವೆ. ಹಾಗಿದ್ದಾಗ ಅದನ್ನು ಎಲ್ಲರೂ ಸೇರಿಯೇ ಹಂಚಿಕೊಳ್ಳಬೇಕು. ಇವು ಜಾರಿಗೆ ಬಂದಾಗ ಮಾತ್ರ ಸಮ ಸಮಾಜ ಜಾರಿಗೊಳ್ಳಲು ಸಾಧ್ಯ. ಶರಣರ ಅನುಭವ ಮಂಟಪವೇ ಇಂದಿನ ಪಾರ್ಲಿಮೆಂಟಿನ ಅಡಿಗಲ್ಲು. ವೇದಿಕೆಯ ಮೇಲೆ ಎಲ್ಲ ಜಾತಿಯವರೂ ಇದ್ದಾರೆ. ಇದೇ ಅನುಭವ ಮಂಟಪ. ಸಮಾಜ ಆರಿಜಾಂಟಲ್ ಆಗಿ ಇರಬೇಕು. ಈ ಮೂಲಕ ಪೂಜ್ಯರು ಬಸವಣ್ಣನವರ ದಾರಿಯಲ್ಲಿ ಸಾಗುವ ಪ್ರಯತ್ನ ಮಾಡಿದ್ದಾರೆ. ನಾಟಕ ಬಹಳ ಪ್ರಬಲವಾದ ಮಾಧ್ಯಮ. ನೃತ್ಯದ ಮೂಲಕ ಬಸವಣ್ಣವರ ಸಂದೇಶ ಜನರಿಗೆ ತಲುಪಿದರೆ ಪೂಜ್ಯರ ಪ್ರಯತ್ನ ಸಾರ್ಥಕವಾಗುವುದು ಎಂದರು.


ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದಾವಣಗೆರೆಯ ಶಾಸಕರು ಹಾಗೂ ಮಾಜಿ ಸಚಿವರಾದ ಶಾಮನೂರು ಶಿವಶಂಕರಪ್ಪ ಮಾತನಾಡಿ ಬಸವಣ್ಣನವರ ವಚನಗಳು ಎಲ್ಲ ಭಾಷೆಗೂ ಹೋಗಿವೆ. ಅಂಗೈಯಲ್ಲಿ ಲಿಂಗವಿಡಿದು ಪೂಜೆ ಮಾಡುವ ಎಲ್ಲರೂ ಲಿಂಗಾಯತರೇ. ಶರಣರು ಕಾಯಕ ಮತ್ತು ದಾಸೋಹಕ್ಕೆ ಹೆಚ್ಚು ಮಹತ್ವ ಕೊಟ್ಟವರು. ಸಾಣೇಹಳ್ಳಿ ಶ್ರೀಗಳು ನಾಟಕಗಳ ಮೂಲಕ ಜನರಿಗೆ ಇಂಥ ತತ್ವ ಸಿದ್ಧಾಂತಗಳನ್ನು ತಲುಪಿಸುವ ಮಹತ್ವದ ಕೆಲಸ ಮಾಡುತ್ತಿದ್ದಾರೆ. ಸ್ತಿçÃಯರಿಗೆ ಸ್ವಾತಂತ್ರö್ಯವನ್ನು ನೀಡಿದ ಧೀರ ಬಸವಣ್ಣ. ಇಂಥ ಬಸವಣ್ಣನವರ ತತ್ವಗಳನ್ನು ಹಿಂದಿ ಭಾಷಿಕರಿಗೆ ತಲುಪಿಸುವ ಕೆಲಸವನ್ನು ಪೂಜ್ಯರು ಮಾಡುತ್ತಿದ್ದಾರೆ. ನಾವು, ನಮ್ಮಂಥವರು ಮಾಡಲಾಗದ ಸಾಂಸ್ಕೃತಿಯ ಕೆಲಸವನ್ನು ಸ್ವಾಮಿಗಳು ಮಾಡುತ್ತಿದ್ದಾರೆ. ಅವರಿಗೆ ಬೇಕಾದ ಧನ ಸಹಾಯನ್ನು ಮಾಡುವ ಪ್ರಯತ್ನ ಯಾವಗಿನಿಂದಲೂ ಮಾಡುತ್ತ ಬಂದಿರುವೆ. ಲಿಂಗಾಯತರು ಮತ್ತು ವೀರಶೈವರು ಎರಡೂ ಒಂದೇ. ಇವುಗಳಲ್ಲಿರುವ ಒಳಪಂಗಡಗಳೆಲ್ಲ ಒಂದೇ ಎನ್ನುವ ಭಾವನೆ ಬಂದರೆ ಲಿಂಗಾಯತ ಧರ್ಮಕ್ಕೆ ಇನ್ನೂ ಹೆಚ್ಚಿನ ಶಕ್ತಿ ಬರುವುದು ಎಂದರು.
ಕರ್ನಾಟಕ ಸರಕಾರದ ಬೃಹತ್ ಮತ್ತು ಮಧ್ಯಮ ಉದ್ಯಮ ಹಾಗೂ ಮೂಲ ಸೌಕರ್ಯ ಇಲಾಖೆಯ ಸಚಿವರಾದ ಎಂ ಬಿ ಪಾಟೀಲ ಮಾತನಾಡಿ ಫ ಘು ಹಳಕಟ್ಟಿಯವರ ಜನ್ಮದಿನದಂದೇ ವಚನ ಅಭಿಯಾನ ಚಾಲನೆಗೊಂಡಿರುವುದು ಅತ್ಯಂತ ಶ್ಲಾಘನೀಯವಾದುದು. ದೇವರಿಗೇ ಕನ್ನಡವನ್ನು ಕಲಿಸಿದವರು ಬಸವಾದಿ ಶರಣರು. ಶರಣರ ಬಗ್ಗೆ ಅನೇಕ ಸಾಹಿತ್ಯಗಳು ಸೃಷ್ಟಿಗೊಂಡಿವೆ. ಆದರೆ ಅವು ಅನ್ಯ ಭಾಷೆಗೆ ಹೋಗಿರುವುದು ಕಡಿಮೆಯೇ. ಅಂಥದ್ದರಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಹಿಂದಿ ನಾಟಕಗಳನ್ನು ತೆಗೆದುಕೊಂಡು ಎರಡು ಬಾರಿ ದೇಶ ಸಂಚಾರ ಮಾಡಿರುವುದು ಮತ್ತು ಈಗ ವಚನಗಳನ್ನು ಹಿಂದಿಗೆ ಅನುವಾದಿಸಿ ದೇಶದಾದ್ಯಂತ ಪ್ರದರ್ಶನಕ್ಕೆ ಸಜ್ಜಾಗಿರುವುದು ನಮ್ಮ ಕನ್ನಡ ನಾಡಿನ ಹೆಮ್ಮೆಯ ವಿಷಯ ಎಂದರು.
ಅಧ್ಯಕ್ಷತೆವಹಿಸಿದ್ದ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ ತಂಗಡಗಿ ಮಾತನಾಡಿ ಸಾಣೇಹಳ್ಳಿಯ ಮಠ ಸಂಸ್ಕೃತಿಯನ್ನು ದಾಸೋಹ ಮಾಡುವ, ಕಲಾವಿದರನ್ನು ಹುಟ್ಟುಹಾಕುವ ಅಭೂತಪೂರ್ವ ಕೆಲಸ ಮಾಡುತ್ತಿದೆ. ಸಾವಿರಾರು ನಾಟಕ ಪ್ರದರ್ಶನಗಳು ಸಾಣೇಹಳ್ಳಿಯಲ್ಲಿ ಪ್ರದರ್ಶನಗೊಂಡಿವೆ. ಅದರಲ್ಲೂ ಬಸವಣ್ಣ ಮೊದಲಾದ ಶರಣರ ತತ್ವ ಸಿದ್ದಾಂತಗಳನ್ನು ನಾಟಕ, ಸಂಗೀತ, ನೃತ್ಯ ರೂಪಕದ ಮೂಲಕ ದೇಶದಾದ್ಯಂತ ಹರಡುವ ಕೆಲಸ ಮಾಡುತ್ತಿರುವುದು ಅತ್ಯಂತ ವಿಶೇಷವಾದುದು. ನಾಟಕ ಮಾಡುವುದು, ಮಾಡಿಸುವುದು ಕಷ್ಟದ ಕೆಲಸ. ಇಂಥ ಕಷ್ಟಕರ ಕೆಲಸವನ್ನು ಶ್ರೀಗಳು ಮಾಡುತ್ತಿರುವುದು ಹೆಮ್ಮೆಯ ವಿಷಯ. ಸಾಣೇಹಳ್ಳಿಯಂತಹ ಸಣ್ಣ ಹಳ್ಳಿಯನ್ನು ವಿಶ್ವವೇ ತಿರುಗಿ ನೋಡುವಂತೆ ಶ್ರೀಗಳು ಮಾಡಿದ್ದಾರೆ. ಅವರ ಎಲ್ಲ ಕಾರ್ಯಗಳಿಗೆ ಸರಕಾರದ ಸಹಕಾರ ಇರುತ್ತದೆ ಎಂದರು.
ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ನ ರಾಜ್ಯ ಮುಖ್ಯ ಆಯುಕ್ತರಾದ ಪಿ ಜಿ ಆರ್ ಸಿಂಧ್ಯಾ ಮಾತನಾಡಿ ಪಂಡಿತಾರಾಧ್ಯ ಶ್ರೀಗಳು ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡವರು. ನಾಟಕ ಮನಸ್ಸುಗಳನ್ನು ಪರಿವರ್ತಿಸುವಲ್ಲಿ ಮುಖ್ಯ ಪಾತ್ರ ವಹಿಸುವವು. ಬಸವಣ್ಣನವರ ವಿಚಾರಗಳನ್ನು ನೃತ್ಯರೂಪಕದ ಮೂಲಕ ಜನರ ತನಕ ತಲುಪಿಸುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದರು.


ವೇದಿಕೆಯ ಮೇಲೆ ತರೀಕೆರೆ ಶಾಸಕ ಶ್ರೀನಿವಾಸ್, ಅಣಬೇರು ರಾಜಣ್ಣ ಮೊದಲಾದವರು ಉಪಸ್ಥಿತರಿದ್ದರು. ಆರಂಭದಲ್ಲಿ ಖ್ಯಾತ ಗಾಯಕ ಸಿದ್ಧರಾಮ ಕೇಸಾಪುರ ವಚನಗೀತೆಗಳನ್ನು ಹಾಡಿದರು. ಸಾಣೇಹಳ್ಳಿಯ ರಾಜು ಲಕ್ಕಮುತ್ತೇನಹಳ್ಳಿ ಸ್ವಾಗತಿಸಿದರು. ಶ್ರೀನಿವಾಸ ಜಿ ಕಪ್ಪಣ್ಣ ಕಾರ್ಯಕ್ರಮ ನಡೆಸಿಕೊಟ್ಟರು.
ಸಭೆಯ ನಂತರ `ನೀನಲ್ಲದೆ ಮತ್ತಾರೂ ಇಲ್ಲವಯ್ಯಾ’ (ತುಮಾರೆ ಸಿವಾ ಔರ್ ಕೋಯಿ ನಹೀ ಹೈ) ನೃತ್ಯ ರೂಪಕ ಅತ್ಯಾಕರ್ಷಕವಾಗಿ ಪ್ರದರ್ಶನಗೊಂಡಿತು. ಪ್ರದರ್ಶನ ಕುರಿತು ಪ್ರೇಕ್ಷಕರು ಸಂವಾದ ನಡೆಸಿದರು.

  • ಹೆಚ್ ಎಸ್ ದ್ಯಾಮೇಶ್

LEAVE A REPLY

Please enter your comment!
Please enter your name here